ಶಿವಮೊಗ್ಗ: ಮೊಬೈಲ್ ಚಾರ್ಜ್ ಗೆ ಹಾಕುವ ವಿಚಾರಕ್ಕೆ ಗಲಾಟೆ ಮಾಡಿ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ತಪ್ಪಿಸ್ಥನಿಗೆ ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ.
ದಿನಾಂಕ: 07-11-2022 ರಂದು ಸಾಗರದ ಮೂರಳ್ಳಿ ಮಾರತಿ ಗ್ರಾಮದ ರಾತ್ರಿ ಸಿದ್ದಪ್ಪ(38) ಈತನು ತಿಮ್ಮಪ್ಪ(52) ಅವರ ಮನೆಗೆ ಅಕ್ರಮ ಪ್ರವೇಶ ಮಾಡಿ, ಮೊಬೈಲ್ ಚಾರ್ಜ್ ಹಾಕುವ ವಿಚಾರದಲ್ಲಿ ತಿಮ್ಮಪ್ಪ ಮತ್ತು ಆತನ ಪತ್ನಿ ಲಕ್ಷ್ಮಿ ಅವರೊಂದಗೆ ಗಲಾಟೆ ಮಾಡಿದ್ದ. ನಂತರ ಮನೆಯ ಡಿಶ್ ಬುಟ್ಟಿಯನ್ನು ದೊಣ್ಣೆಯಿಂದ ಹೊಡೆದು, ಮುರಿದು ಹಾಕಿದ್ದು, ಕೊಲೆ ಮಾಡುವ ಉದ್ದೇಶದಿಂದಲೇ ತಿಮ್ಮಪ್ಪನ ಎಡಗಣ್ಣಿನ ಹುಬ್ಬಿನ ಮೇಲೆ ಬಲವಾಗಿ ದೊಣ್ಣೆಯಿಂದ ಹೊಡೆದು, ಹಲ್ಲೆ ಮಾಡಿದ್ದ. ವ್ರವಾಗಿ ಗಾಯಗೊಂಡು ನೆಲದ ಮೇಲೆ ಕುಸಿದು ಬಿದ್ದಿದ್ದ ಅವರನ್ನು ಚಿಕಿತ್ಸೆಗೆ ಉಡುಪಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:09-11-2022 ರಂದು ತಿಮ್ಮಪ್ಪ ಮೃತಪಟ್ಟಿದ್ದರು.
ತಿಮ್ಮಪ್ಪನನ್ನು ಕೊಲೆ ಮಾಡಿದ ಆರೋಪಿ ಸಿದ್ದಪ್ಪ ಈತನ ವಿರುದ್ಧ ಸೂಕ್ತ ಕ್ರಮಕ್ಕಾಗಿ ನೀಡಿದ ದೂರಿನ ಮೇರೆಗೆ ಕಾರ್ಗಲ್ ಪೊಲೀಸ್ ಠಾಣೆ ಗುನ್ನೆ ನಂ 63/2022 ಕಲಂ 302, 427, 448, 506 ಐಪಿಸಿ ಕಾಯಿದೆ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ಆಗಿನ ತನಿಖಾಧಿಕಾರಿ ಸಾಗರ ಗ್ರಾಮಾಂತರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ಕೃಷ್ಣಪ್ಪ ಕೆ.ವಿ. ಅವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ, ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.
5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸಾಗರದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತನ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ರವೀಂದ್ರ ಆರ್. ಅವರು ದಿನಾಂಕ: 26-12-2025 ರಂದು ಆರೋಪಿ ಸಿದ್ದಪ್ಪನಿಗೆ ಕಲಂ 304 (Part II), 323, 427, 506 ಐಪಿಸಿ ಕಾಯ್ದೆಗೆ 4 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ರೂ 13,000 ದಂಡ, ತಪ್ಪಿದ್ದಲ್ಲಿ 6 ತಿಂಗಳ ಸಾದಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ. ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಅಣ್ಣಪ್ಪ ನಾಯ್ಕ್ ವಾದ ಮಂಡಿಸಿದ್ದರು.

