ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಕಾರಿನ ಮೇಲೆ ದುಷ್ಕರ್ಮಿಗಳು ಚಪ್ಪಲಿ, ಇಟ್ಟಿಗೆ, ಕಲ್ಲುತೂರಾಟ ನಡೆಸಿರುವ ಘಟನೆ ನಡೆದಿದೆ.
ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾದ ಟಿಎಂಸಿ ಕಾರ್ಯಕರ್ತನ ಮನೆಗೆ ಮಮತಾ ಬ್ಯಾನರ್ಜಿಯವರು ತೆರಳುತ್ತಿದ್ದ ವೇಳೆ ಹಲಿಸಹಾರ್ ಎಂಬಲ್ಲಿ ಅವರ ಕಾರನ್ನು ತಡೆದ ಜನರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ, ಕೆಲ ದುಷ್ಕರ್ಮಿಗಳು ಕಾರಿನ ಮೇಲೆ ಕೆಸರು ಸುರಿದು, ಶೂಗಳು ಮತ್ತು ನೀರಿನ ಬಾಟಲಿ, ಕಲ್ಲು, ಇಟ್ಟಿಗೆಗಳನ್ನು ಎಸೆದಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಪ್ರತಿಭಟನಾಕಾರರು ಚೋರ್ ಭಾಗಾವೋ ಎಂದು ಘೋಷಣೆ ಕೂಗಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸಪಟ್ಟಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿಯವರು, ಇಲ್ಲಿಯವರೆಗೆ ನಾನು ಇಂತಹ ಭೀಕರ ದಾಳಿಯನ್ನು ಎದುರಿಸಿರಲಿಲ್ಲ. ಕಾರಿನ ಕಿಟಕಿಗಳನ್ನು ಮುಚ್ಚಿಲ್ಲದಿದ್ದರೆ, ಕಲ್ಲು ನನ್ನ ತಲೆಗೆ ಬಿದ್ದು ಸಾಯುವ ಸಾಧ್ಯತೆ ಇತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರ ಮುಂದೆಯೇ ಕಿಡಿಗೇಡಿಗಳು ದಾಳಿ ನಡೆಸಿದ್ದಾರೆ. ಪೊಲೀಸರು ನಮ್ಮನ್ನು ರಕ್ಷಿಸಲು ಏನೂ ಮಾಡಲಿಲ್ಲ. ಅವರು ಬಿಜೆಪಿಗೆ ಮಾತ್ರ ರಕ್ಷಣೆ ನೀಡುತ್ತಾರೆ ಎಂದು ಕಿಡಿಕಾರಿದ್ದಾರೆ.

