ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೇರುತ್ತಿದ್ದಂತೆಯೇ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಲ್ಲಿ ಅಲ್ಲೋಲಕಲ್ಲೋಲ ಶುರುವಾಗಿದೆ. ಬಿಜೆಪಿ ಎದುರು ಸೋಲುಂಡಿರುವ ಟಿಎಂಸಿ ಪಕ್ಷದ ಒಳಗಿನ ಆಂತರಿಕ ಕಲಹ ಸ್ಫೋಟಗೊಂಡಿದ್ದು, ರೆಬಲ್ ನಾಯಕರು ದೀರ್ಘಕಾಲದ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದಾರೆ.
ಇದೇ ವೇಳೆ ಮಮತಾ ಬ್ಯಾನರ್ಜಿ ಅವರ ಸೋದರಸಬಂಧಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರನ್ನೂ ಪಕ್ಷದಿಂದ ಅಮಾನತುಗೊಳಿಸಲಾಗಿದೆ.
ಕೋಲ್ಕತ್ತಾದ ನ್ಯೂಟೌನ್‌ನಲ್ಲಿರುವ ಪಂಚತಾರಾ ಹೋಟೆಲ್‌ನಲ್ಲಿ ನಡೆದ ಬಂಡಾಯ ಬಣದ ವಿಶೇಷ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು. ಋತಬ್ರತಾ ಬ್ಯಾನರ್ಜಿ ನೇತೃತ್ವದ ಬಂಡಾಯ ಶಿಬಿರವು ಮಮತಾ ಬ್ಯಾನರ್ಜಿ ಅವರನ್ನು ಹುದ್ದೆಯಿಂದ ವಜಾಗೊಳಿಸಿದ್ದು, ಮಾಜಿ ಸಚಿವ ಹಾಗೂ ಹಿರಿಯ ಶಾಸಕ ಅರೂಪ್ ರಾಯ್ ಅವರನ್ನು ಟಿಎಂಸಿಯ ನೂತನ ಅಖಿಲ ಭಾರತ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಕಾರ್ಯವೈಖರಿ ವಿರುದ್ಧ ಅಸಮಾಧಾನಗೊಂಡಿದ್ದ ಬಂಡಾಯ ನಾಯಕರು, ಅವರನ್ನು ಪಕ್ಷದಿಂದ ಅಮಾನತುಗೊಳಿಸುವ ನಿರ್ಣಯಕ್ಕೆ ಸರ್ವಾನುಮತದಿಂದ ಸಹಿ ಹಾಕಿದ್ದಾರೆ. ಪಕ್ಷದ ಸಂಘಟನೆಯಲ್ಲಿ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನು ಮರಳಿ ತರಲು 20 ಸದಸ್ಯರ ಹೊಸ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ. ಇದರಲ್ಲಿ ಹಿರಿಯ ನಾಯಕ ಫಿರ್ಹಾದ್ ಹಕೀಮ್ ಸೇರಿದಂತೆ 12 ಪ್ರಮುಖ ನಾಯಕರನ್ನು ಸೇರಿಸಿಕೊಳ್ಳಲಾಗಿದೆ.
ವಿಧಾನಸಭೆಯಲ್ಲಿ ಬಜೆಟ್ ಮಂಡನೆಯಾದ ತಕ್ಷಣವೇ ಬಂಡಾಯ ನಾಯಕರು ರಹಸ್ಯ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ಪ್ರಭಾವಿ ನಾಯಕರಾದ ಋತಬ್ರತಾ ಬ್ಯಾನರ್ಜಿ, ಫಿರ್ಹಾದ್ ಹಕೀಮ್, ಅರೂಪ್ ರಾಯ್, ಜಾವೇದ್ ಖಾನ್ ಮತ್ತು ರತಿನ್ ಘೋಷ್ ಸೇರಿದಂತೆ ಹಲವು ಶಾಸಕರು ಮತ್ತು ಮುಖಂಡರು ಭಾಗವಹಿಸಿದ್ದರು. ನಾವೇ ಅಸಲಿ ತೃಣಮೂಲ ಕಾಂಗ್ರೆಸ್ ನವರು ಎಂದು ಈ ಬಣ ಹೇಳಿಕೊಂಡಿದೆ.
ಪಕ್ಷದ ಮೇಲೆ ಸಂಪೂರ್ಣ ಹಿಡಿತ ಹೊಂದಿದ್ದ ಮಮತಾ ಬ್ಯಾನರ್ಜಿ ಅವರನ್ನೇ ಕುರ್ಚಿಯಿಂದ ಇಳಿಸಿರುವ ಈ ನಡೆ ಇಡೀ ದೇಶದ ರಾಜಕೀಯ ವಲಯವನ್ನು ಬೆಚ್ಚಿಬೀಳಿಸಿದೆ. ಮಮತಾ ಬ್ಯಾನರ್ಜಿ ಅವರ ಮುಂದಿನ ನಡೆ ಹಾಗೂ ಪಶ್ಚಿಮ ಬಂಗಾಳದ ರಾಜಕೀಯ ತೀವ್ರ ಕುತೂಹಲ ಮೂಡಿಸಿದೆ.

