
ನವದೆಹಲಿ: ವಕ್ಪ್ ಭೂಮಿ ಕಬಳಿಕೆ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿರುವ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಕ್ಷಮೆ ಕೇಳಬೇಕು ಎಂದು ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯಲ್ಲಿ ಆಗ್ರಹಿಸಿದ್ದಾರೆ.
ಗುರುವಾರ ವಕ್ಪ್ ವಿಧೇಯಕ ಮಂಡನೆಗೆ ಮುನ್ನ ಅನುರಾಗ್ ಠಾಕೂರ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಮಲ್ಲಿಕಾರ್ಜುನ ಖರ್ಗೆ, ಇಂತಹ ರಾಜಕೀಯ ದಾಳಿಗಳಿಗೆ ನಾನು ಬೆದರುವ ಮಾತೇ ಇಲ್ಲ. ನನ್ನ ಜೀವನ ತೆರೆದ ಪುಸ್ತಕ. ಜೀವನದಲ್ಲಿ ಕಷ್ಟ ಮತ್ತು ಹೋರಾಟವಿದೆ. ಸಾರ್ವಜನಿಕ ಜೀವನದಲ್ಲಿ ಉನ್ನತ ಮೌಲ್ಯ ಕಾಪಾಡಿಕೊಂಡು ಬಂದಿದ್ದೇನೆ. 60 ವರ್ಷ ರಾಜಕೀಯದಲ್ಲಿ ಇದನ್ನು ಬಯಸಿರಲಿಲ್ಲ. ಇಂತಹ ಆಧಾರ ರಹಿತ ಆರೋಪ ನಿರೀಕ್ಷಿಸಲಿಲ್ಲ ಎಂದು ಹೇಳಿದ್ದಾರೆ.
ನಾನು ಕಾರ್ಮಿಕನ ಮಗ, ಕಾರ್ಮಿಕ ನಾಯಕ, ಅಲ್ಲಿಂದ ಕಾಂಗ್ರೆಸ್ ಅಧ್ಯಕ್ಷನಾಗಿದ್ದೇನೆ. ನಾನು ಒಂದಿಂಚು ಭೂಮಿಯನ್ನು ಕಬಳಿಸಿಲ್ಲ. ನನ್ನ ಬಗ್ಗೆ ಆರೋಪ ಮಾಡಿದ ಅನುರಾಗ್ ಠಾಕೂರ್ ಕ್ಷಮೆ ಕೇಳಲೇಬೇಕು ಎಂದು ಆಗ್ರಹಿಸಿದ್ದಾರೆ. ಅನುರಾಗ್ ಠಾಕೂರ್ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ಅವರು ರಾಜೀನಾಮೆ ನೀಡಬೇಕು. ಆರೋಪ ಸಾಬೀತುಪಡಿಸಿದಲ್ಲಿ ನಾನು ರಾಜೀನಾಮೆ ನೀಡುತ್ತೇನೆ ಎಂದು ಮಲ್ಲಿಕಾರ್ಜುನ ಖರ್ಗೆ ಸವಾಲು ಹಾಕಿದ್ದಾರೆ.
ನಂತರ ರಾಜ್ಯಸಭೆ ಅಧ್ಯಕ್ಷ ಜಗದೀಪ್ ಧನಕರ್ ಈ ಚರ್ಚೆಯನ್ನು ಶಿಸ್ತು ಸಮಿತಿಯ ಪರಿಶೀಲನೆಗೆ ಒಪ್ಪಿಸಿದ್ದಾರೆ.