ಬೆಂಗಳೂರು: ಭಾರತೀಯ ಸಂಸ್ಕೃತಿಯಲ್ಲಿ ಮಕರ ಸಂಕ್ರಾಂತಿಗೆ ಕೇವಲ ಸುಗ್ಗಿ ಹಬ್ಬದ ಮಹತ್ವ ಮಾತ್ರವಲ್ಲ, ಆಧ್ಯಾತ್ಮಿಕವಾಗಿಯೂ ಅಪಾರ ಶಕ್ತಿಯಿದೆ. ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಈ ಕಾಲವನ್ನು ಉತ್ತರಾಯಣ ಪುಣ್ಯಕಾಲವೆಂದು ಕರೆಯಲಾಗುತ್ತದೆ. ಜಾತಕದಲ್ಲಿ ಸೂರ್ಯ ದೋಷವಿದ್ದು, ಜೀವನದಲ್ಲಿ ಸತತ ಅಡೆತಡೆ ಎದುರಿಸುತ್ತಿರುವವರಿಗೆ ಈ ದಿನವು ಅತ್ಯಂತ ಶ್ರೇಷ್ಠವಾಗಿದೆ.
ಸೂರ್ಯನು ಈ ಜಗತ್ತಿನ ಅಸ್ತಿತ್ವಕ್ಕೆ ಮೂಲಾಧಾರ ಆತನ ಶಕ್ತಿಯಿಲ್ಲದೆ ಜೀವಸಂಕುಲದ ಕಲ್ಪನೆಯೇ ಅಸಾಧ್ಯ. ಇದೇ ಕಾರಣಕ್ಕೆ ಸೂರ್ಯನನ್ನು ಪವಿತ್ರ ಭಾವದಿಂದ ಆರಾಧಿಸಲಾಗುತ್ತದೆ. ವೈದಿಕ ಶಾಸ್ತ್ರಗಳ ಪ್ರಕಾರ, ಸೂರ್ಯನನ್ನು ಎಲ್ಲಾ ಗ್ರಹಗಳಿಗೂ ಅಧಿಪತಿ ಎಂದು ಕರೆಯಲಾಗಿದೆ. ಜನ್ಮ ಕುಂಡಲಿಯಲ್ಲಿ ಸೂರ್ಯನ ಸ್ಥಾನವು ಪ್ರಬಲವಾಗಿದ್ದರೆ ನಮ್ಮ ಬದುಕು ಸೂರ್ಯನ ಪ್ರಭೆಯಂತೆಯೇ ತೇಜಸ್ವಿಯಾಗಿ ಮತ್ತು ಸುಂದರವಾಗಿ ಅರಳುತ್ತದೆ. ಒಂದು ವೇಳೆ ಸೂರ್ಯನು ದುರ್ಬಲ ಸ್ಥಾನದಲ್ಲಿದ್ದರೆ ಜೀವನದಲ್ಲಿ ನಾನಾ ರೀತಿಯ ಅಡೆತಡೆಗಳು ಎದುರಾಗಬಹುದು
ಸೂರ್ಯ ದೋಷದ ಲಕ್ಷಣಗಳೇನು?
ಜಾತಕದಲ್ಲಿ ಸೂರ್ಯನು ದುರ್ಬಲನಾಗಿದ್ದರೆ ಅಥವಾ ದೋಷಪೂರಿತನಾಗಿದ್ದರೆ ವ್ಯಕ್ತಿಯು ಈ ಕೆಳಗಿನ ಸಮಸ್ಯೆಗಳನ್ನು ಎದುರಿಸಬಹುದು:
ಆತ್ಮವಿಶ್ವಾಸದ ಕೊರತೆ ಮತ್ತು ವೃತ್ತಿಜೀವನದಲ್ಲಿ ಮಾನ್ಯತೆ ಸಿಗದಿರುವುದು.
ಆರೋಗ್ಯ ಸಮಸ್ಯೆಗಳು, ವಿಶೇಷವಾಗಿ ಕಣ್ಣಿನ ತೊಂದರೆಗಳು.
ತಂದೆಯೊಂದಿಗೆ ಭಿನ್ನಾಭಿಪ್ರಾಯ ಹಾಗೂ ಕೌಟುಂಬಿಕ ಕಲಹ.
ವ್ಯಾಪಾರ-ವ್ಯವಹಾರದಲ್ಲಿ ಭಾರೀ ನಷ್ಟ.
ಸೂರ್ಯ ದೋಷ ನಿವಾರಣೆಗೆ ಸಂಕ್ರಾಂತಿ ದಿನದ ವಿಶೇಷ ಕ್ರಮಗಳು:
ಸಂಕ್ರಾಂತಿಯಂದು ಸೂರ್ಯನ ಕಿರಣಗಳು ಭೂಮಿಯ ಮೇಲೆ ವಿಶೇಷ ಪ್ರಭಾವ ಬೀರುವುದರಿಂದ, ಈ ಕೆಳಗಿನ ವಿಧಿವಿಧಾನಗಳನ್ನು ಅನುಸರಿಸುವುದು ಉತ್ತಮ:
1.ಪವಿತ್ರ ಸ್ನಾನ ಮತ್ತು ಸೂರ್ಯ ಮಂತ್ರ:
ಬೆಳಿಗ್ಗೆ ಬ್ರಹ್ಮ ಮುಹೂರ್ತದಲ್ಲಿ ಎದ್ದು ನದಿ ಅಥವಾ ಪವಿತ್ರ ತೀರ್ಥಗಳಲ್ಲಿ ಸ್ನಾನ ಮಾಡಿ. ಸಾಧ್ಯವಾಗದಿದ್ದರೆ ಸ್ನಾನದ ನೀರಿಗೆ ಸ್ವಲ್ಪ ಗಂಗಾಜಲ ಮತ್ತು ಎಳ್ಳನ್ನು ಬೆರೆಸಿ ಸ್ನಾನ ಮಾಡುವುದು ಶುಭಕರ. ನಂತರ ಶುದ್ಧ ಬಟ್ಟೆ ಧರಿಸಿ ಸೂರ್ಯ ದೇವರಿಗೆ ಪ್ರಾರ್ಥನೆ ಸಲ್ಲಿಸಿ.
2.ಸೂರ್ಯನಿಗೆ ಅರ್ಘ್ಯ ಅರ್ಪಣೆ:
ತಾಮ್ರದ ಚಂಬಿನಲ್ಲಿ ಶುದ್ಧ ನೀರು, ಕೆಂಪು ಹೂವುಗಳು, ಧಾನ್ಯ ಮತ್ತು ಸ್ವಲ್ಪ ಬೆಲ್ಲವನ್ನು ಹಾಕಿ ಉದಯಿಸುವ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ. ಈ ಸಮಯದಲ್ಲಿ “ಓಂ ಸೂರ್ಯಾಯ ನಮಃ” ಅಥವಾ ಗಾಯತ್ರಿ ಮಂತ್ರ ಪಠಿಸುವುದರಿಂದ ಸೂರ್ಯ ದೋಷ ನಿವಾರಣೆಯಾಗಿ ಮನಸ್ಸಿಗೆ ಶಾಂತಿ ಲಭಿಸುತ್ತದೆ.
3.ದಾನ ಧರ್ಮದ ಮಹಿಮೆ:
ಸಂಕ್ರಾಂತಿಯಂದು ಮಾಡುವ ದಾನವು ನೂರು ಪಟ್ಟು ಪುಣ್ಯ ತರುತ್ತದೆ ಎಂಬ ನಂಬಿಕೆಯಿದೆ. ಸೂರ್ಯ ದೋಷ ನಿವಾರಣೆಗಾಗಿ ಎಳ್ಳು, ಬೆಲ್ಲ, ಗೋಧಿ, ಕೆಂಪು ಬಟ್ಟೆ ಅಥವಾ ತಾಮ್ರದ ಪಾತ್ರೆಗಳನ್ನು ಬಡವರಿಗೆ ದಾನ ಮಾಡಿ. ಎಳ್ಳು-ಬೆಲ್ಲದ ದಾನವು ಶನಿ ಮತ್ತು ಸೂರ್ಯನ ನಡುವಿನ ಸೌಹಾರ್ದತೆಯನ್ನು ಸೂಚಿಸುತ್ತದೆ.
4.ಮನೆಯಲ್ಲಿ ತಾಮ್ರದ ಸೂರ್ಯ ಮೂರ್ತಿ:
ಮನೆಯ ಪೂಜಾ ಕೋಣೆಯಲ್ಲಿ ತಾಮ್ರದ ಸೂರ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದರಿಂದ ಅನಾರೋಗ್ಯದಿಂದ ಮುಕ್ತಿ ಪಡೆಯಬಹುದು. ಇದು ಮನೆಯ ವಾಸ್ತು ದೋಷಗಳನ್ನು ನಿವಾರಿಸಿ ಸುಖ-ಸಮೃದ್ಧಿ ನೆಲೆಸುವಂತೆ ಮಾಡುತ್ತದೆ.

