ನವದೆಹಲಿ : ಆನ್ ಲೈನ್ ವಂಚನೆಗಳನ್ನು ತಡೆಗಟ್ಟಲು ಮತ್ತು ಡಿಜಿಟಲ್ ವಹಿವಾಟುಗಳನ್ನು ಹೆಚ್ಚು ಸುರಕ್ಷಿತಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಏಪ್ರಿಲ್ 1, 2026 ರಿಂದ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಇನ್ನು ಮುಂದೆ ಡಿಜಿಟಲ್ ಪಾವತಿ ಮಾಡುವಾಗ ಕೇವಲ ಒಟಿಪಿ (OTP) ನಮೂದಿಸಿದರೆ ಸಾಲದು, ಅದರೊಂದಿಗೆ ಹೆಚ್ಚುವರಿ ಭದ್ರತಾ ಹಂತಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.
ಹೌದು. ಆನ್‌ಲೈನ್ ಹಣಕಾಸು ವಹಿವಾಟುಗಳಲ್ಲಿ ಹೆಚ್ಚುತ್ತಿರುವ ಸೈಬರ್ ವಂಚನೆ ಮತ್ತು ಫಿಶಿಂಗ್ ಹಗರಣಗಳಿಗೆ ಕಡಿವಾಣ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಹೊಸ ಹಣಕಾಸು ವರ್ಷ ಅಂದರೆ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಡಿಜಿಟಲ್ ಪಾವತಿಗಳಿಗಾಗಿ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದ್ದು, ಇನ್ನು ಮುಂದೆ ಕೇವಲ ಒಟಿಪಿ (OTP) ಮೂಲಕ ವಹಿವಾಟು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಗ್ರಾಹಕರ ಹಣದ ಸುರಕ್ಷತೆಗಾಗಿ ‘ಟೂ-ಫ್ಯಾಕ್ಟರ್ ಅಥೆಂಟಿಕೇಶನ್’ (2FA) ಅಡಿಯಲ್ಲಿ ಒಟಿಪಿಯೊಂದಿಗೆ ಕಡ್ಡಾಯವಾಗಿ ಪಿನ್ (PIN), ಪಾಸ್‌ವರ್ಡ್ ಅಥವಾ ಬಯೋಮೆಟ್ರಿಕ್ ದೃಢೀಕರಣವನ್ನು ಬಳಸುವುದು ಕಡ್ಡಾಯವಾಗಿದೆ. ಈ ಹೊಸ ನಿಯಮದಿಂದಾಗಿ ಪಾವತಿ ಪ್ರಕ್ರಿಯೆ ಸ್ವಲ್ಪ ನಿಧಾನವಾದರೂ, ಆನ್‌ಲೈನ್ ವಂಚನೆಗಳಿಂದ ಗ್ರಾಹಕರಿಗೆ ಸಂಪೂರ್ಣ ರಕ್ಷಣೆ ಸಿಗಲಿದೆ ಎಂದು ಆರ್‌ಬಿಐ (RBI) ತಿಳಿಸಿದೆ.
ಪ್ರಮುಖ ಬದಲಾವಣೆಗಳು
ಕಡ್ಡಾಯ ‘ಟೂ-ಫ್ಯಾಕ್ಟರ್ ಅಥೆಂಟಿಕೇಶನ್’ (2FA): ಇನ್ನು ಮುಂದೆ ಪ್ರತಿ ವಹಿವಾಟಿಗೆ ಕನಿಷ್ಠ ಎರಡು ಹಂತದ ದೃಢೀಕರಣ ಇರಲೇಬೇಕು. ಕೇವಲ OTP ಇನ್ನು ಮುಂದೆ ಸಾಕಾಗುವುದಿಲ್ಲ. ಅದರೊಂದಿಗೆ ಪಿನ್ (PIN), ಪಾಸ್ವರ್ಡ್, ಬಯೋಮೆಟ್ರಿಕ್ (ಬೆರಳಚ್ಚು ಅಥವಾ ಮುಖದ ಗುರುತು) ಅಥವಾ ಟೋಕನ್ಗಳಲ್ಲಿ ಯಾವುದಾದರೂ ಒಂದನ್ನು ಬಳಸುವುದು ಕಡ್ಡಾಯ.
OTP ಮಾತ್ರ ಏಕೆ ಸಾಲದು?: ಫಿಶಿಂಗ್ ಮತ್ತು ಸಿಮ್ ಸ್ವ್ಯಾಪ್ಗಳಂತಹ ವಂಚನೆಗಳು ಹೆಚ್ಚುತ್ತಿರುವುದರಿಂದ, ಕೇವಲ OTP ಸುರಕ್ಷಿತವಲ್ಲ ಎಂದು RBI ಭಾವಿಸಿದೆ. ಹೀಗಾಗಿ ಫಿಂಗರ್ಪ್ರಿಂಟ್ ಅಥವಾ ಪಿನ್ನಂತಹ ಎರಡನೇ ಹಂತದ ಭದ್ರತೆಯನ್ನು ಸೇರಿಸಲಾಗಿದೆ.
ವಹಿವಾಟಿನ ಸಮಯ: ಹೆಚ್ಚುವರಿ ಭದ್ರತಾ ಹಂತಗಳಿಂದಾಗಿ ಪಾವತಿ ಪ್ರಕ್ರಿಯೆಯು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಆದರೆ, ನಂಬಿಕಸ್ಥ ಸಾಧನಗಳನ್ನು (Trusted Devices) ಬಳಸುವವರಿಗೆ ಪ್ರಕ್ರಿಯೆ ಸುಗಮವಾಗಿರಲಿದೆ. ದೊಡ್ಡ ಮೊತ್ತದ ವಹಿವಾಟುಗಳಿಗೆ ಹೆಚ್ಚಿನ ತಪಾಸಣೆ ಇರಲಿದೆ.
ಬ್ಯಾಂಕುಗಳ ಜವಾಬ್ದಾರಿ: ವ್ಯವಸ್ಥೆಯ ವೈಫಲ್ಯದಿಂದಾಗಿ ವಂಚನೆ ಸಂಭವಿಸಿದರೆ ಬ್ಯಾಂಕುಗಳೇ ಹೊಣೆಯಾಗಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಗ್ರಾಹಕರಿಗೆ ಬ್ಯಾಂಕುಗಳು ಪರಿಹಾರ ನೀಡಬೇಕಾಗಬಹುದು ಮತ್ತು ದೂರುಗಳ ಶೀಘ್ರ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುವುದು.
ಅಂತರಾಷ್ಟ್ರೀಯ ಪಾವತಿಗಳು: ಇದೇ ರೀತಿಯ ನಿಯಮಗಳು ವಿದೇಶಿ ವಹಿವಾಟುಗಳಿಗೂ ಅನ್ವಯವಾಗಲಿದ್ದು, ಅಕ್ಟೋಬರ್ 2026 ರ ವೇಳೆಗೆ ಇದು ಸಂಪೂರ್ಣವಾಗಿ ಜಾರಿಗೆ ಬರಲಿದೆ.
ಏನಿದರ ಉದ್ದೇಶಗಳು
- ಸೈಬರ್ ವಂಚನೆ ಮತ್ತು ಹಗರಣಗಳನ್ನು ಕಡಿಮೆ ಮಾಡುವುದು.
- ಡಿಜಿಟಲ್ ಪಾವತಿಗಳ ಮೇಲೆ ಗ್ರಾಹಕರ ನಂಬಿಕೆ ಹೆಚ್ಚಿಸುವುದು.
- UPI ಮತ್ತು ಕಾರ್ಡ್ ಪಾವತಿಗಳನ್ನು ಹೆಚ್ಚು ಸುರಕ್ಷಿತಗೊಳಿಸುವುದು.

