ಬೆಂಗಳೂರು: ಸರ್ಕಾರಿ ನಿವಾಸಕ್ಕಾಗಿ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಹಾಗೂ ಹಾಲಿ ಸಚಿವ ಬೈರತಿ ಸುರೇಶ್ ನಡುವೆ ಜಟಾಪಟಿ ಆರಂಭವಾಗಿದೆ. ಮಾಜಿ ಸಚಿವರು ಸರ್ಕಾರಿ ನಿವಾಸ ಖಾಲಿ ಮಾಡಲು ಇನ್ನೂ ಸಮಯಾವಕಾಶಗಳಿದ್ದರೂ ಸಚಿವ ಬೈರತಿ ಸುರೇಶ್ ಮಾಜಿ ಸಚಿವ ಮಹದೇವಪ್ಪ ಅವರ ಮೇಲೆ ಮನೆ ಖಾಲಿ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಬೆಂಗಳೂರು ನಗರದ ಪ್ರತಿಷ್ಠಿತ ಕ್ರೆಸೆಂಟ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸಕ್ಕಾಗಿ ಸಚಿವ ಬೈರತಿ ಸುರೇಶ್ ಹಾಗೂ ಮಾಜಿ ಸಚಿವ ಮಹದೇವಪ್ಪ ನಡುವೆ ಸಂಘರ್ಷ ಜೋರಾಗಿದೆ.
ಕ್ರೆಸೆಂಟ್ ರಸ್ತೆಯ ನಂ.2 ಸರ್ಕಾರಿ ಬಂಗಲೆಯನ್ನು ತಮ್ಮ ವಶಕ್ಕೆ ಪಡೆಯಲು ಸಾರಿಗೆ ಸಚಿವ ಬೈರತಿ ಸುರೇಶ್ ಹಾಗೂ ಮಾಜಿ ಸಚಿವ ಡಾ. ಎಚ್.ಸಿ. ಮಹದೇವ ನಡುವೆ ಜಟಾಪಟಿ ನಡೆಯುತ್ತಿದೆ.
ಸಚಿವರಾಗಿದ್ದ ಅವಧಿಯಿಂದಲೂ ಡಾ. ಎಚ್.ಸಿ. ಮಹದೇವಪ್ಪ ಇದೇ ಬಂಗಲೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಈಗ ಸಚಿವ ಸ್ಥಾನದಲ್ಲಿಲ್ಲದಿರುವುದರಿಂದ ಅವರು ಈ ಮನೆ ಖಾಲಿ ಮಾಡಬೇಕಿದೆ. ಆದರೆ ನಿಯಮಾವಳಿಗಳ ಪ್ರಕಾರ ಸರ್ಕಾರಿ ನಿವಾಸವನ್ನು ತೆರವುಗೊಳಿಸಲು ಅವರಿಗೆ ಇನ್ನೂ ಸಮಯಾವಕಾಶವಿದೆ. ಆದರೆ ಅಷ್ಟರಲ್ಲೇ ಈ ನಿವಾಸವನ್ನು ತಮ್ಮ ಸುಪರ್ದಿಗೆ ಪಡೆಯಲು ಮುಂದಾಗಿರುವ ಸಚಿವ ಬೈರತಿ ಸುರೇಶ್ ಮಹದೇವಪ್ಪ ಅವರು ಬಂಗಲೆಯಲ್ಲೇ ಇರುವಾಗಲೇ ಏಕಾಏಕಿ ನವೀಕರಣ ಕಾಮಗಾರಿ ಶುರುಮಾಡಿಸಿದ್ದಾರೆ.
ಸಚಿವರಿಗೆ ಮನೆ ಖಾಲಿ ಮಾಡಲು 90 ದಿನಗಳ ಕಾಲಾವಕಾಶವಿದೆ. ಹೀಗಿದ್ದರೂ ಮಹದೇವಪ್ಪ ಹಾಗೂ ಅವರ ಕುಟುಂಬದವರು ಮನೆಯಲ್ಲಿ ಇರುವಾಗಲೇ ಬಂಗಲೆಯ ಆವರಣಕ್ಕೆ ಜೆಸಿಬಿ ತರಿಸಿ ಅಲ್ಲಿದ್ದ ಮೀಟಿಂಗ್ ಹಾಲ್ ಅನ್ನು ನೆಲಸಮ ಮಾಡಿಸಲಾಗಿದೆ. ಅಷ್ಟೇ ಅಲ್ಲದೆ ಬೈರತಿ ಸುರೇಶ್ ಅವರ ಸೂಚನೆಯ ಮೇರೆಗೆ ಬಂಗಲೆಗೆ ಪೇಂಟಿಂಗ್ ಹಾಗೂ ನವೀಕರಣ ಕಾರ್ಯಗಳು ಭರದಿಂದ ಸಾಗುತ್ತಿವೆ. ಮಹದೇವಪ್ಪನವರ ಸಿಬ್ಬಂದಿಗಳಿಗೂ ಸಚಿವ ಬೈರತಿ ಸುರೇಶ್ ಆವಾಜ್ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಅದೇ ಮನೆಯಲ್ಲಿ ಮಹದೇವಪ್ಪ ಅವರು ವಾಸವಾಗಿದ್ದರೂ ಸಚಿವ ಬೈರತಿ ಸುರೇಶ್ ಅವರನ್ನು ಭೇಟಿ ಮಾಡಿ ಮತನಾಡಿಸಿಲ್ಲ. ಇನ್ನೊಂದೆಡೆ ನಿವಾಸವನ್ನು ಎರಡೇ ದಿನಗಳಲ್ಲಿ ಖಾಲಿ ಮಾಡುವಂತೆ ಸಚಿವ ಬೈರತಿ ಸುರೇಶ್ ಹಾಗೂ ಅವರ ಬೆಂಬಲಿಗರು ಮಹದೇವಪ್ಪ ಅವರ ಮನೆ ಸಿಬ್ಬಂದಿಗೆ ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾಗಿದೆ.
ಮನೆ ಖಾಲಿ ಮಾಡಲು ಸಮಯಾವಕಾಶವಿದ್ದರೂ ಮಾಜಿ ಸಚಿವರು ನಿಯಮಬದ್ಧವಾಗಿ ತೆರವು ಮಾಡುವ ಮೊದಲೇ ಸಚಿವರ ದಬ್ಬಾಳಿಕೆಯಿಂದ ಈ ರೀತಿ ಕಾಮಗಾರಿ ಆರಂಭಿಸಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಮಹದೇವಪ್ಪ, ನನಗೆ ಬಾಡಿಗೆ ಮನೆ ಸಿಕ್ಕಿದ ತಕ್ಷಣ ಹಳೆ ಬಂಗಲೆಯನ್ನು ಖಾಲಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಈ ಬಂಗಲೆ ಈಗ ಬೈರತಿ ಸುರೇಶ್ ಅವರಿಗೆ ಹಂಚಿಕೆಯಾಗಿದೆ. ಹೀಗಾಗಿ ಅವರು ಖಾಲಿ ಮಾಡುವಂತೆ ಕೇಳಿದ್ದಾರೆ. ಅವರಿಗೆ ತೊಂದರೆ ಇರುವುದರಿಂದಲೇ ಬೇಗ ಖಾಲಿ ಮಾಡಲು ಒತ್ತಾಯಿಸುತ್ತಿರಬಹುದು, ಇದರಲ್ಲಿ ಅವರ ತಪ್ಪೇನೂ ಇಲ್ಲ. ಇಲ್ಲಿ ಹಿರಿಯ-ಕಿರಿಯ ಎಂಬ ಪ್ರಶ್ನೆಯೇ ಬರುವುದಿಲ್ಲ. ಅವರು ಹಾಲಿ ಸಚಿವರಾಗಿದ್ದು, ಅವರ ದೈನಂದಿನ ಕಾರ್ಯಚಟುವಟಿಕೆಗಳಿಗೆ ಅಡ್ಡಿಯಾಗಬಾರದು ಎಂಬುದು ನನ್ನ ಉದ್ದೇಶ ಎಂದು ಮಹದೇವಪ್ಪ ಹೇಳಿದರು.
ನಾನು ಈ ಹಿಂದೆ ಸಚಿವ ಸ್ಥಾನದಲ್ಲಿದ್ದ ಕಾರಣ ಸರ್ಕಾರ ಈ ನಿವಾಸವನ್ನು ನೀಡಿತ್ತು. ಈಗ ನಾನು ಸಚಿವನಾಗಿಲ್ಲ, ಹಾಗಾಗಿ ಬೇಗನೆ ಬಿಟ್ಟುಕೊಡಬೇಕಿರುವುದು ಧರ್ಮ. ನನಗೆ ಬೆಂಗಳೂರಿನಲ್ಲಿ ಸ್ವಂತ ಮನೆ ಇಲ್ಲದಿರುವುದರಿಂದ ಬಾಡಿಗೆ ಮನೆ ಹುಡುಕುತ್ತಿದ್ದೇನೆ. ಸೂಕ್ತ ಮನೆ ಅಂತಿಮವಾದ ತಕ್ಷಣವೇ ಈ ಬಂಗಲೆಯನ್ನು ಖಾಲಿ ಮಾಡುತ್ತೇನೆ ಎಂದರು.

