ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪಡೆದ ಆರೋಪದಲ್ಲಿ ಸಿಲುಕಿದ್ದ ನಿಗಮದ ಮಾಜಿ ಅಧ್ಯಕ್ಷ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳ್ ಅವರನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ದೋಷಮುಕ್ತಗೊಳಿಸಿದೆ.
ಮಾಡಾಳ್ ವಿರೂಪಾಕ್ಷಪ್ಪ ಕರ್ನಾಟಕ ಸಾಬೂನು ಮಾರ್ಜಕ ನಿಗಮದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ 2023ರ ಮಾರ್ಚ್ 2ರಂದು ಲೋಕಾಯುಕ್ತ ದಾಳಿ ನಡೆಸಲಾಗಿತ್ತು. ಮಾಡಾಳ್ ಅವರ ಪುತ್ರ ಪ್ರಶಾಂತ್ ನಿಗಮಕ್ಕೆ ಸುಗಂಧ ದ್ರವ್ಯ ಪೂರೈಸುವವರಿಂದ 40 ಲಕ್ಷ ರೂಪಾಯಿ ಪಡೆಯುವಾಗ ಸಿಕ್ಕಿದ್ದರು. ಹಣ ವಶಕ್ಕೆ ಪಡೆದ ಆಧಾರದಲ್ಲಿ ಆರೋಪ ಹೊರಿಸುವುದು ಸರಿಯಲ್ಲ ಎಂದು ನ್ಯಾಯಾಲಯ ಹೇಳಿದೆ. ಹಣ ಸ್ವೀಕಾರ ನಿಜ. ಆದರೆ, ಹಣ ಕೇಳಿದ್ದಕ್ಕೆ ಸಾಕ್ಷ್ಯವಿಲ್ಲ ಎಂದು ಪ್ರಶಾಂತ್ ಅವರನ್ನು ದೋಷಮುಕ್ತಗೊಳಿಸಿದೆ. ಪ್ರಶಾಂತ್ ಮಾಡಾಳ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯದಿಂದ ಈ ಆದೇಶ ನೀಡಲಾಗಿದೆ.
ಪ್ರಶಾಂತ್ ಮಾಡಾಳ್ ಬೆಂಗಳೂರು ಜಲ ಮಂಡಳಿಯಲ್ಲಿ ಹಣಕಾಸು ಸಲಹೆಗಾರರಾಗಿದ್ದರು. ಅವರು ನಿಗಮಕ್ಕೆ ಸುಗಂಧದ್ರವ್ಯ ಸಾಮಗ್ರಿ ಪೂರೈಸುವವರಿಂದ 40ಲಕ್ಷ ರೂ. ಪಡೆದ ಆರೋಪದ ವಿಚಾರಣೆ ನಡೆಸಿದ ಕೋರ್ಟ್, ಲಂಚದ ಹಣವನ್ನು ಪ್ರಶಾಂತ್ ಸ್ವೀಕರಿಸಿದ್ದಾರೆ ಎನ್ನುವ ವಾದ ಒಪ್ಪಬಹುದಾದರೂ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಯಾವುದೇ ಸಾಕ್ಷಿ ಇಲ್ಲ. ಕೇವಲ ಹಣ ವಶಪಡಿಸಿಕೊಂಡ ಆಧಾರದ ಮೇಲೆ ಲಂಚದ ಆರೋಪ ಹೊರಿಸುವುದು ಸರಿಯಲ್ಲ. ಅರ್ಜಿದಾರರ ವಿರುದ್ಧ ಆರೋಪ ಹೊರಿಸಲು ಯಾವುದೇ ಆಧಾರವಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ ಅವರನ್ನು ಆರೋಪ ಮುಕ್ತಗೊಳಿಸಿದೆ.