ಬೆಂಗಳೂರು: ಸಿಎಂ ಸಿದ್ದರಾಮಯ್ಯ ಏರ್ಪಡಿಸಿದ್ದ ಡಿನ್ನರ್ ಮೀಟಿಂಗ್ ನಲ್ಲಿ ಯಾವುದೇ ಸೀರಿಯಸ್ ವಿಷಯ ಚರ್ಚೆಯಾಗಿಲ್ಲ. ಸುಮ್ಮನೆ ಎಲ್ಲರೂ ಊಟಕ್ಕೆ ಸೇರಿದ್ದೆವು ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್, ಊಟ ಚೆನ್ನಾಗಿತ್ತು. ನಾನು ದೋಸೆ, ಎರಡು ಇಡ್ಲಿ ತಿಂದೆ. ಅಂತಹ ಯಾವುದೇ ಗಂಭೀರ ವಿಷಯ ಚರ್ಚೆಯಾಗಿಲ್ಲ. ಸಂಪುಟ ಪುನರಚನೆ ಬಗ್ಗೆಯೂ ಚರ್ಚೆಯಾಗಿಲ್ಲ ಎಂದು ಹೇಳಿದರು.
ಕಲೆಕ್ಷನ್ ವಿಚಾರ ಚರ್ಚೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಸಚಿವರು, ನಮ್ಮಲ್ಲಿ ಯಾವುದೇ ಕಲೆಕ್ಷನ್ ವಿಚಾರ ಚರ್ಚೆ ಆಗಿಲ್ಲ. ಬಿಜೆಪಿಯಲ್ಲಿ ಬಹುಶಃ ಈ ರೀತಿ ಊಟಕ್ಕೆ ಸೇರಿದಾಗ ಕಲೆಕ್ಷನ್ ವಿಚಾರ ಚರ್ಚೆ ಮಾಡಬಹುದು. ಬಿಜೆಪಿಯವರಲ್ಲಿ ಆ ಪದ್ಧತಿ ಇದೆ ಅದಕ್ಕೆ ಹೇಳುತ್ತಿದ್ದಾರೆ ಎಂದರು.
ಬಿಜೆಪಿಯವರು ಮೊದಲು ತಮ್ಮ ಮನೆ ನೋಡಿಕೊಳ್ಳಲಿ. ಅವರದ್ದು ಒಂದು ಮನೆ ನೂರು ಬಾಗಿಲು ಆಗಿದೆ. ತಮ್ಮ ಮನೆ ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಲಿ, ಕಾಂಗ್ರೆಸ್ ಬಗ್ಗೆ ಅವರಿಗೆ ಚಿಂತೆ ಬೇಡ ಎಂದು ವಾಗ್ದಾಳಿ ನಡೆಸಿದರು.