ದಾವಣಗೆರೆ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು ಎನ್ನುವ ಅಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ 76.43 ಲಕ್ಷ ರೂಪಾಯಿ ವಂಚಿಸಲಾಗಿದೆ.
ದಾವಣಗೆರೆಯ ವಿನಾಯಕ ಬಡಾವಣೆಯ ವ್ಯಕ್ತಿ ವಂಚನೆಗೆ ಒಳಗಾಗಿದ್ದಾರೆ. ಫೇಸ್ಬುಕ್ ಮೂಲಕ ಪರಿಚಿತನಾಗಿದ್ದ ವ್ಯಕ್ತಿಯನ್ನು ನಂಬಿದ ಅವರು ಹಣ ಕಳೆದುಕೊಂಡಿದ್ದಾರೆ. ಜಾಲತಾಣದಲ್ಲಿ ಪರಿಚಿತನಾದ ವ್ಯಕ್ತಿ ಸ್ನೇಹದಿಂದ ವರ್ತಿಸಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದೆಂದು ಆಮಿಷವೊಡ್ಡಿದ್ದಾನೆ.
ನಂತರ ವಾಟ್ಸಾಪ್ ಮೂಲಕ ಸಂಪರ್ಕ ಸಾಧಿಸಿ ಹಣ ಹೂಡಿಕೆ ಮಾಡಿಸಿಕೊಂಡಿದ್ದ. ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ ವಿವಿಧ ಬ್ಯಾಂಕ್ ಖಾತೆಗಳಿಗೆ 10 ಬಾರಿ ಹಣ ವರ್ಗಾವಣೆ ಮಾಡಲಾಗಿದೆ. ಹೂಡಿಕೆ ಮಾಡಿದ ಹಣವನ್ನು ದಿನ ಬಿಟ್ಟು ದಿನ ಹಿಂಪಡೆಯಲು ಪ್ರಯತ್ನಿಸಿದಾಗ ವಂಚನೆಯ ಜಾಲಕ್ಕೆ ಸಿಲುಕಿರುವುದು ಗೊತ್ತಾಗಿ ವ್ಯಕ್ತಿ ದೂರು ನೀಡಿದ್ದಾರೆ. ದಾವಣಗೆರೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

