ಈ ವರ್ಷದ ಮೊದಲ ಪೂರ್ಣ ಚಂದ್ರ ಗ್ರಹಣ ಮಾರ್ಚ್ 3ರಂದು ಸಂಭವಿಸಲಿದೆ. ಆಗಸದಲ್ಲಿ ನಡೆಯಲಿರುವ ಅಪರೂಪದ ವಿದ್ಯಾಮಾನ ಇದಾಗಿದೆ. ಈ ಗ್ರಹಣದ ಹಿನ್ನಲೆಯಲ್ಲಿ ವಿವಿಧ ದೇವಾಲಯಗಳ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಈ ಕುರಿತು ಭಕ್ತಾಧಿಗಳ ಗಮನಕ್ಕೆ ಮಾಹಿತಿ ಪ್ರಕಟಿಸಲಾಗಿದೆ.
ಮಾರ್ಚ್ 3, 2026ರ ಫಾಲ್ಗುಣ ಮಾಸದ ಹುಣ್ಣಿಮೆಯಂದು ಸಂಭವಿಸುವ ಚಂದ್ರ ಗ್ರಹಣದ ಕಾರಣ ಧಾರ್ಮಿಕ ಆಚರಣೆಗಳು ಮತ್ತು ಸಂಪ್ರದಾಯಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಭಕ್ತರು ದೇವಾಲಯಗಳ ಆಡಳಿತ ಮಂಡಳಿ ಜೊತೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಈ ಚಂದ್ರಗ್ರಹಣವು ವರ್ಷದ ಅತ್ಯಂತ ದೀರ್ಘವಾದ ಗ್ರಹಣವಾಗಿದೆ. ಮಾರ್ಚ್ 3ರ ಮಂಗಳವಾರ ಮಧ್ಯಾಹ್ನ 3:20ಕ್ಕೆ ಚಂದ್ರಗ್ರಹಣ ಆರಂಭವಾಗಲಿದೆ. ಸಂಜೆ 6:47ಕ್ಕೆ ಕೊನೆಗೊಳ್ಳಲಿದೆ. ಈ ಚಂದ್ರಗ್ರಹಣದ ಅವಧಿ 3 ಗಂಟೆ 27 ನಿಮಿಷಗಳು.
ದೇವಾಲಯಗಳ ವೇಳಾಪಟ್ಟಿ ಬದಲು: ಚಂದ್ರಗ್ರಹಣದ ಕಾರಣ ದೇವಾಲಯಗಳ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ. ಈ ಕುರಿತು ಭಕ್ತರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಗ್ರಹಣದ ಅವಧಿಯಲ್ಲಿ ದೇವಾಲಯದ ಬಾಗಿಲು ಮುಚ್ಚಿರುವ ಕಾರಣ ಮಧ್ಯಾಹ್ನದ ದೇವರ ದರ್ಶನ ಇರುವುದಿಲ್ಲ.
ಮಾರ್ಚ್ 3ರಂದು ಸಂಭವಿಸುವ ಫಾಲ್ಗುಣ ಶುಕ್ಲ ಪೌರ್ಣಮಿ ಖಗ್ರಾಸ ಗ್ರಸ್ತೋದಯ ಚಂದ್ರಗ್ರಹಣ ಪ್ರಯುಕ್ತ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಬೆಳಗ್ಗೆ 9 ರಿಂದ ರಾತ್ರಿ 7.15ರವರೆಗೆ ಸಾರ್ವಜನಿಕ ಭಕ್ತಾದಿಗಳಿಗೆ ದೇವರ ದರ್ಶನ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಈ ದಿನದಂದು ಯಾವುದೇ ಪಿಂಡಪ್ರಧಾನ, ಪಿತೃ ಕಾರ್ಯಗಳು, ಹುಣ್ಣಿಮೆಯ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಭಕ್ತಾದಿಗಳಿಗೆ ಅನ್ನದಾಸೋಹ ಇರುವುದಿಲ್ಲ. ಅಂತೆಯೇ ಶ್ರೀ ತಲಕಾವೇರಿ ದೇವಾಲಯದಲ್ಲಿ ಬೆಳಗ್ಗೆ 9 ರಿಂದ ಸಾರ್ವಜನಿಕ ಭಕ್ತಾದಿಗಳಿಗೆ ದೇವರ ದರ್ಶನ ಇರುವುದಿಲ್ಲ ಎಂಬುದನ್ನು ಸ್ವಷ್ಟಪಡಿಸಲಾಗಿದೆ.
ಆದ್ದರಿಂದ ಭಕ್ತಾದಿಗಳು ಸಹಕರಿಸುವಂತೆ ದೇವಾಲಯದ ಆಡಳಿತಾಧಿಕಾರಿಗಳ ಪರವಾಗಿ ಕಾರ್ಯನಿರ್ವಾಹಕ ಅಧಿಕಾರಿಯಾದ ಚಂದ್ರಶೇಖರ್ ಎನ್.ಜಿ. ಮನವಿ ಮಾಡಿದ್ದಾರೆ.

