ಇರಾನ್ ಹಾಗೂ ಅಮೆರಿಕಾ-ಇಸ್ರೇಲ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆಯಲ್ಲಿ ಭಾರೀ ವ್ಯತ್ಯಯವಾಗಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹೋಟೆಲ್, ಪಿಜಿಗಳು ಕಟ್ಟಿಗೆ ಒಲೆ ಮೊರೆ ಹೋಗಿದ್ದು, ಕಟ್ಟಿಗೆಗೆ ದಿಢೀರ್ ಎಂದು ಬೇಡಿಕೆ ಹೆಚ್ಚಾಗಿದೆ.
ಕಟ್ಟಿಗೆ ಪೂರೈಕೆಗೆ ಬೇಡಿಕೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಮರಗಳನ್ನು ಅಕ್ರಮವಾಗಿ ಕಡಿಯಲಾಗುತ್ತಿದೆ. ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಕಣ್ಗಾವಲುವಹಿಸಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಈ ಕುರಿತು ಸೂಚನೆಯನ್ನು ನೀಡಿದ್ದಾರೆ.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರು, ಅರಣ್ಯ ಇಲಾಖೆ ಬೆಂಗಳೂರು ಇವರಿಗೆ ಸಚಿವರು ಟಿಪ್ಪಣಿಯನ್ನು ಹೊರಡಿಸಿದ್ದಾರೆ.
ಸಚಿವರ ಟಿಪ್ಪಣಿ: ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಅಡುಗೆ ಅನಿಲ ಅಭಾವ ತಲೆದೋರಿದ್ದು, ಇದರ ಬಿಸಿ ಕರ್ನಾಟಕಕ್ಕೂ ತಟ್ಟಿದೆ.
ಹೋಟೆಲ್, ರೆಸಾರ್ಟ್, ಹೋಂಸ್ಟೇಗಳಿಗೆ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ದೊರಕದೆ ಸಮಸ್ಯೆ ಆಗಿದೆ. ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲೂ ವ್ಯತ್ಯಯ ಆಗುತ್ತಿರುವ ಹಿನ್ನೆಲೆಯಲ್ಲಿ ಸೌದೆಗೆ ಬೇಡಿಕೆ ಹೆಚ್ಚಾಗುತ್ತಿರುವುದನ್ನು ಗಮನಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಅರಣ್ಯದೊಳಗೆ, ಅರಣ್ಯದಂಚಿನಲ್ಲಿ ಅಷ್ಟೇ ಅಲ್ಲದೆ, ಇಲಾಖೆಯ ನಡುತೋಪು, ಸರ್ಕಾರಿ ಜಮೀನು, ರಸ್ತೆ ಬದಿ ಬೆಳೆದ ಮರಗಳಿಗೂ ಕೊಡಲಿ ಪೆಟ್ಟು ಬೀಳುವ ಅಪಾಯವಿದೆ.
ಅರಣ್ಯ ಇಲಾಖೆ ಯಾವುದೇ ವೃಕ್ಷ ಅಕ್ರಮ ಕಡಿತಲೆ ಆಗದಂತೆ ಕಟ್ಟೆಚ್ಚರ ವಹಿಸುವುದು ಅತ್ಯಗತ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಎಲ್ಲ ವೃತ್ತದ, ಎಲ್ಲ ವಲಯಗಳಲ್ಲೂ ಸೂಕ್ತ ಗಸ್ತು ಮುಂಜಾಗರೂಕತಾ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಒಂದೊಮ್ಮೆ ಅರಣ್ಯ, ಸರ್ಕಾರಿ ಜಮೀನಿನಲ್ಲಿ ಅಕ್ರಮ ಮರ ಕಡಿತಲೆ ಆದರೆ ಸಂಬಂಧಿತ ವಲಯದ ಅಧಿಕಾರಿ, ಸಿಬ್ಬಂದಿಯನ್ನೇ ಹೊಣೆ ಮಾಡಲಾಗುವುದು ಎಂದು ಈ ಮೂಲಕ ಎಚ್ಚರಿಸಲಾಗಿದೆ ಎಂದು ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.

