ಆಗಸ್ಟ್ 16ಕ್ಕೆ ಮುಕ್ತಾಯವಾಗಬೇಕಿದ್ದ LPG ಗ್ಯಾಸ್ ಇ-ಕೆವೈಸಿ ಗಡುವನ್ನು ತೈಲ ಕಂಪನಿಗಳು ಆಗಸ್ಟ್ 23ರವರೆಗೆ ವಿಸ್ತರಿಸಿವೆ. ಸರ್ವರ್ ಸಮಸ್ಯೆ ಸೇರಿದಂತೆ ಹಲವು ತಾಂತ್ರಿಕ ತೊಂದರೆಗಳಿಂದಾಗಿ ಅನೇಕ ಗ್ರಾಹಕರು ನಿಗದಿತ ಅವಧಿಯಲ್ಲಿ ಇ-ಕೆವೈಸಿ ಪೂರ್ಣಗೊಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಹೌದು. ಎಲ್ಪಿಜಿ ಗ್ಯಾಸ್ ಗ್ರಾಹಕರಿಗೆ ತೈಲ ಕಂಪನಿಗಳು ಗುಡ್ ನ್ಯೂಸ್ ನೀಡಿದ್ದು, ಆಗಸ್ಟ್ 16ಕ್ಕೆ ಮುಕ್ತಾಯವಾಗಬೇಕಿದ್ದ ಇ-ಕೆವೈಸಿ ಗಡುವನ್ನು ಆಗಸ್ಟ್ 23ರವರೆಗೆ ವಿಸ್ತರಿಸಿವೆ. ಸರ್ವರ್ ಹಾಗೂ ತಾಂತ್ರಿಕ ಸಮಸ್ಯೆಗಳಿಂದ ಹಲವರು ಇ-ಕೆವೈಸಿ ಪೂರ್ಣಗೊಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಗಡುವು ವಿಸ್ತರಿಸಲಾಗಿದೆ.
ಗ್ಯಾಸ್ ಸಂಪರ್ಕ ಹೊಂದಿರುವ ಗ್ರಾಹಕರು ಆಗಸ್ಟ್ 23ರೊಳಗೆ ಕಡ್ಡಾಯವಾಗಿ ಇ-ಕೆವೈಸಿ ಪೂರ್ಣಗೊಳಿಸಬೇಕು. ಆಧಾರ್ ಮೂಲಕ ಇ-ಕೆವೈಸಿ ಮಾಡಲು ಪ್ರಯತ್ನಿಸಿದಾಗ ಸರ್ವರ್ ಸಮಸ್ಯೆ, ಆ್ಯಪ್ ಮತ್ತು ಪೋರ್ಟಲ್ಗಳು ಸರಿಯಾಗಿ ಕಾರ್ಯನಿರ್ವಹಿಸದಿರುವುದು ಸೇರಿದಂತೆ ಹಲವು ತೊಂದರೆಗಳು ಎದುರಾಗಿವೆ. ಇದರಿಂದ ಗ್ಯಾಸ್ ಏಜೆನ್ಸಿಗಳ ಕಚೇರಿಗಳ ಮುಂದೆ ಗ್ರಾಹಕರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ.
ಇ-ಕೆವೈಸಿ ಹೇಗೆ ಪೂರ್ಣಗೊಳಿಸಬೇಕು?
ಗ್ಯಾಸ್ ಸಂಪರ್ಕ ಯಾರ ಹೆಸರಿನಲ್ಲಿ ಇದೆಯೋ, ಆ ವ್ಯಕ್ತಿಯೇ ಇ-ಕೆವೈಸಿ ಪೂರ್ಣಗೊಳಿಸಬೇಕು. ಇದಕ್ಕಾಗಿ ಸಂಬಂಧಿಸಿದ ಗ್ಯಾಸ್ ಕಂಪನಿಯ ವೆಬ್ಸೈಟ್ ಅಥವಾ ಆ್ಯಪ್ಗೆ ಲಾಗಿನ್ ಮಾಡಿ ಇ-ಕೆವೈಸಿ ಆಯ್ಕೆಯನ್ನು ಆರಿಸಬೇಕು. ಬಳಿಕ ಆಧಾರ್ ಸಂಖ್ಯೆ ಹಾಗೂ ಗ್ಯಾಸ್ ಸಂಪರ್ಕದ ವಿವರಗಳನ್ನು ನಮೂದಿಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.
ಇದಲ್ಲದೆ, ನಿಮ್ಮ ಗ್ಯಾಸ್ ಏಜೆನ್ಸಿ ಕಚೇರಿಗೆ ತೆರಳಿ ಇ-ಕೆವೈಸಿ ಮಾಡಿಸಿಕೊಳ್ಳಬಹುದು. ಮನೆಗೆ ಗ್ಯಾಸ್ ಸಿಲಿಂಡರ್ ವಿತರಿಸಲು ಬರುವ ಸಿಬ್ಬಂದಿ ಬಳಿ ಇರುವ ಸಾಧನದ ಮೂಲಕವೂ ಇ-ಕೆವೈಸಿ ಪೂರ್ಣಗೊಳಿಸುವ ಅವಕಾಶವಿದೆ.

