ಎಲ್ಪಿಜಿ ಇಕೆವೈಸಿ (eKYC) ಮಾಡಿಸಲು ಗ್ಯಾಸ್ ಏಜೆನ್ಸಿಗಳ ಮುಂದೆ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುತ್ತಿದ್ದ ಗ್ರಾಹಕರಿಗೆ ಕೇಂದ್ರ ಸರ್ಕಾರ ನಿರಾಳ ಸುದ್ದಿ ನೀಡಿದೆ. ಬಯೋಮೆಟ್ರಿಕ್ ಆಧಾರ್ ದೃಢೀಕರಣವು ಎಲ್ಲಾ ಗ್ರಾಹಕರಿಗೆ ಕಡ್ಡಾಯವಲ್ಲ ಎಂದು ಪೆಟ್ರೋಲಿಯಂ ಸಚಿವಾಲಯ ಸ್ಪಷ್ಟಪಡಿಸಿದೆ. ಕೇವಲ ಉಜ್ವಲ ಯೋಜನೆಯ ಫಲಾನುಭವಿಗಳು ಮತ್ತು ಇದುವರೆಗೆ ಒಮ್ಮೆಯೂ ಇಕೆವೈಸಿ ಮಾಡಿಸದವರಿಗೆ ಮಾತ್ರ ಇದು ಅನ್ವಯಿಸಲಿದ್ದು, ಸಾಮಾನ್ಯ ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.
ಹೌದು. ಎಲ್ಪಿಜಿ ಇಕೆವೈಸಿ (eKYC) ಅಥವಾ ಬಯೋಮೆಟ್ರಿಕ್ ಆಧಾರ್ ದೃಢೀಕರಣದ ಕುರಿತಾದ ಗೊಂದಲಗಳಿಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಸ್ಪಷ್ಟನೆ ನೀಡಿದೆ.
ಎಲ್ಪಿಜಿ ಇಕೆವೈಸಿ : ಯಾರಿಗೆ ಕಡ್ಡಾಯ ? ಯಾರಿಗೆ ಬೇಡ
- ಎಲ್ಲರಿಗೂ ಕಡ್ಡಾಯವಲ್ಲ: ಇಕೆವೈಸಿ ಪ್ರಕ್ರಿಯೆಯು ಎಲ್ಲಾ ಎಲ್ಪಿಜಿ ಗ್ರಾಹಕರಿಗೆ ಕಡ್ಡಾಯವಲ್ಲ. ಈಗಾಗಲೇ ಒಮ್ಮೆ ಯಶಸ್ವಿಯಾಗಿ ಇಕೆವೈಸಿ ಪೂರ್ಣಗೊಳಿಸಿದ ಸಾಮಾನ್ಯ ಗ್ರಾಹಕರು ಮತ್ತೊಮ್ಮೆ ಮಾಡಿಸುವ ಅಗತ್ಯವಿಲ್ಲ.
- ಈ ಗ್ರಾಹಕರಿಗೆ ಮಾತ್ರ ಅನ್ವಯ: ಇದುವರೆಗೆ ಒಮ್ಮೆಯೂ ಆಧಾರ್ ಬಯೋಮೆಟ್ರಿಕ್ ದೃಢೀಕರಣ ಮಾಡಿಸದ ಗ್ರಾಹಕರಿಗೆ ಮಾತ್ರ ಇದು ಕಡ್ಡಾಯವಾಗಿದೆ.
- ಪಿಎಂ ಉಜ್ವಲ ಯೋಜನೆ ಫಲಾನುಭವಿಗಳು: ಉಜ್ವಲ ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವವರು ಪ್ರತಿ ಹಣಕಾಸು ವರ್ಷಕ್ಕೆ ಒಮ್ಮೆ ಇಕೆವೈಸಿ ಅಪ್‌ಡೇಟ್ ಮಾಡುವುದು ಅಗತ್ಯ. ವಿಶೇಷವಾಗಿ 7 ಸಿಲಿಂಡರ್ ನಂತರದ ಸಬ್ಸಿಡಿ ಪಡೆಯುವ ಸಂದರ್ಭದಲ್ಲಿ ಇದು ಅನ್ವಯಿಸುತ್ತದೆ.
ಇಕೆವೈಸಿ ಮಾಡುವುದು ಹೇಗೆ?
- ವಿತರಕರ ಕಚೇರಿ: ನಿಮ್ಮ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಅಲ್ಲಿ ಬಯೋಮೆಟ್ರಿಕ್ ಯಂತ್ರದ ಮೂಲಕ ದೃಢೀಕರಣ ಮಾಡಬಹುದು.
- ಆನ್‌ಲೈನ್ ಮೂಲಕ (ಮನೆಯಲ್ಲೇ ಕುಳಿತು): * ಮೊದಲು ಸ್ಮಾರ್ಟ್‌ಫೋನ್‌ನಲ್ಲಿ ‘Aadhaar Face RD’ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು.
- ನಂತರ ನಿಮ್ಮ ಗ್ಯಾಸ್ ಕಂಪನಿಯ ಅಧಿಕೃತ ಆ್ಯಪ್ (ಉದಾಹರಣೆಗೆ: IndianOil One, BPCL Hello, ಅಥವಾ HP Pay) ಮೂಲಕ ಮುಖದ ಗುರುತಿನ (Face Authentication) ಮೂಲಕ ಇಕೆವೈಸಿ ಪೂರ್ಣಗೊಳಿಸಬಹುದು. ಇದು ಉಚಿತವಾದ ಪ್ರಕ್ರಿಯೆಯಾಗಿದೆ.
ಗಮನಿಸಿ: ಅನಗತ್ಯವಾಗಿ ಗ್ಯಾಸ್ ಏಜೆನ್ಸಿಗಳ ಮುಂದೆ ಸಾಲಿನಲ್ಲಿ ನಿಂತು ಆತಂಕ ಪಡುವ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

