ಬೆಂಗಳೂರು: ಪ್ರೇಮಿಗಳಿಬ್ಬರು ಪ್ರೀತಿ-ಪ್ರೇಮ ಎಂದು ಮನೆ ಬಿಟ್ಟು ಓಡಿಹೋದ ಕಾರಣಕ್ಕೆ ಕೋಪಗೊಂಡ ಯುವತಿಯ ಕಡೆಯವರು ಯುವಕನ ಅಣ್ಣ ಅರ್ಚಕನನ್ನು ಕಿಡ್ನ್ಯಾಪ್ ಮಾಡಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ವಿಧಿಸಿದ್ದಾರೆ ಯುವತಿಯ ಪೋಷಕರು. ಯುವಕನ ಅಣ್ಣ ಅರ್ಚಕನನ್ನು ಕಿಡ್ನ್ಯಾಪ್ ಮಾಡಿ ಕೂಡಿ ಹಾಕಿ ಮೈಕೈ ಮುರಿಯುವಂತೆ ಹಲ್ಲೆ ನಡೆಸಿದ್ದಾರೆ. ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಬ್ಯಾಡರಹಳ್ಳಿ ಮೂಲದ ಶಿವಕುಮಾರ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇವರ ಪ್ರೀತಿಗೆ ಮನೆಯವರ ವಿರೋಧವಿತ್ತು. ಯುವತಿ ಮನೆಯವರು ಮದುವೆಗೆ ಒಪ್ಪಿರಲಿಲ್ಲ. ಇದರಿಂದ ಪ್ರೇಮಿಗಳಿಬ್ಬರೂ ಮನೆ ಬಿಟ್ಟು ಓಡಿಹೋಗಿದ್ದಾರೆ. ಇದರಿಂದ ಸಿಟ್ಟಿಗೆದ್ದ ಯುವತಿಯ ತಂದೆ ಬಸವರಾಜ್ ಮತ್ತು ಆತನ ಸಂಬಂಧಿಕರು, ಶಿವಕುಮಾರ್ ನ ಅಣ್ಣ ಅರ್ಚಕನಾಗಿದ್ದ ಕೊಟ್ರೇಶ್ ಮೇಲೆ ದ್ವೇಷ ಸಾಧಿಸಿದ್ದಾರೆ.
ಬ್ಯಾಡರಹಳ್ಳಿಯ ದೇವಾಲಯವೊಂದರಲ್ಲಿ ಅರ್ಚಕರಾಗಿರುವ ಕೊಟ್ರೇಶ್ ಅವರನ್ನು ಪೊಲೀಸ್ ಸ್ಟೇಷನ್‌ಗೆ ಹೋಗೋಣ ಬಾ ಎಂದು ನಂಬಿಸಿ ಕಾರಿನಲ್ಲಿ ಕರೆದೊಯ್ದಿದ್ದಾರೆ. ಆದರೆ ಸ್ಟೇಷನ್‌ಗೆ ಹೋಗುವ ಬದಲಾಗಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಕೂಡಿ ಹಾಕಿದ್ದಾರೆ. ಆಗಲೇ ಗೊತ್ತಾಗಿದ್ದು, ಕೊಟ್ರೇಶ್ ಗೆ ತನ್ನನು ಕಿಡ್ನ್ಯಾಪ್ ಮಾಡಿದ್ದಾರೆ ಎಂಬುದು.
ಕೊಟ್ರೇಶ್ ಅವರ ಕೈಕಾಲುಗಳನ್ನು ಕಟ್ಟಿ ಹಾಕಿ ಕೂಡಿ ಹಾಕಿ ಮನ ಬಂದಂತೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡುವ ದೃಶ್ಯವನ್ನು ಚಿತ್ರೀಕರಿಸಿ ತಮ್ಮನಿಗೆ ಎಲ್ಲಿದರೂ ವಾಪಸ್ ಬರುವಂತೆ ಹೇಳಿಸಿದ್ದಾರೆ. “ಶಿವು, ನೀನು ಎಲ್ಲಿದ್ದರೂ ಹುಡುಗಿಯನ್ನು ತಂದು ಒಪ್ಪಿಸು” ಎಂದು ಹೇಳಿಸಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಪ್ರಾಣಭಯದಲ್ಲಿದ್ದ ಕೊಟ್ರೇಶ್ ತಮ್ಮನ ಬಳಿ ಅಂಗಲಾಚುವ ವಿಡಿಯೋವನ್ನು ಆರೋಪಿಗಳು ಅವರ ಸಂಬಂಧಿಕರಿಗೆ ಕಳುಹಿಸಿ ಬೆದರಿಕೆ ಹಾಕಿದ್ದಾರೆ.
ವಿಡಿಯೋ ಕಂಡು ಆತಂಕಕ್ಕೊಳಗಾದ ಕೊಟ್ರೇಶ್ ಕುಟುಂಬಸ್ಥರು ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಾಚರಣೆಗೆ ಇಳಿದಿದ್ದು. ಕೊಟ್ರೇಶ್ ಅವರನ್ನು ರಕ್ಷಿಸಿದ್ದಾರೆ. ಆರೋಪಿಗಳನ್ನು ಬಂಧಿಸಿದ್ದಾರೆ.
ಗಂಭೀರವಾಗಿ ಹಲ್ಲೆಗೊಳಗಾಗಿರುವ ಕೊಟ್ರೇಶ್ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬ್ಯಾಡರಹಳ್ಳಿ ಪೊಲೀಸರಿಂದ ತನಿಖೆ ಮುಂದುವರೆಸಿದ್ದಾರೆ.

