ಬೆಂಗಳೂರು: ಭಾರಿ ವಾಹನ ಸೇರಿದಂತೆ ವಾಣಿಜ್ಯ ವಾಹನಗಳಿಗೆ ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ ಸಿಸ್ಟಮ್(ವಿ.ಎಲ್.ಟಿ.ಡಿ.) ಅಳವಡಿಕೆ, ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಗಳ ತೆರವು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಕ್ಷಿಣ ಭಾರತ ಮೋಟಾರು ಸಾರಿಗೆ ಸಂಘ ಆ. 1 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಘೋಷಿಸಿದೆ.
ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್. ಷಣ್ಮುಖಪ್ಪ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಸಾರ್ವಜನಿಕ ವಾಹನಗಳ ರೀತಿ ಸರಕು ಸಾಗಾಣೆ ಲಾರಿಗಳು ಕೂಡ ವಿ.ಎಲ್.ಟಿ.ಡಿ. ಅಳವಡಿಸಬೇಕೆಂದು ಹೇಳಲಾಗಿದೆ. ಇದಕ್ಕೆ ಅರ್ಥವಿಲ್ಲ, ಹೀಗಾಗಿ ಸರ್ಕಾರದ ಆದೇಶ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯಗಳ ಗಡಿಯಲ್ಲಿನ ಚೆಕ್ ಪೋಸ್ಟ್ ತೆರವು ಮಾಡುವಂತೆ ಈ ಹಿಂದೆ ಹಲವು ಬಾರಿ ಮನವಿ ಮಾಡಿದ್ದರೂ ಸರ್ಕಾರ ಕ್ರಮ ಕೈಗೊಂಡಿಲ್ಲ. ಚಾಲಕರಿಗೆ ಯಾವುದೇ ಸೌಲಭ್ಯ ನೀಡದ ನೈಸ್ ರಸ್ತೆಯ ಟೋಲ್ ಅನ್ನು ಕೂಡಲೇ ರದ್ದು ಮಾಡಬೇಕು. ನೈಸ್ ರಸ್ತೆ ವಶಕ್ಕೆ ಪಡೆಯಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಪಾಂಡಿಚೇರಿ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ರಾಜ್ಯ ಸರ್ಕಾರಗಳಿಗೆ ಬೇಡಿಕೆಗಳ ಈಡೇರಿಕೆ ಮನವಿ ಸಲ್ಲಿಸಲಾಗುವುದು. ಜುಲೈ 30ರೊಳಗೆ ಕ್ರಮ ಕೈಗೊಳ್ಳದಿದ್ದರೆ ದಕ್ಷಿಣ ಭಾರತ ಮೋಟಾರ್ ಸಾರಿಗೆ ಸಂಘದ ನೇತೃತ್ವದಲ್ಲಿ ಎಲ್ಲಾ ಆರು ರಾಜ್ಯಗಳಲ್ಲಿ ಲಾರಿ ಮುಷ್ಕರ ನಡೆಸಲಾಗುವುದು. ರಾಜ್ಯದ 7 ಲಕ್ಷ ಲಾರಿಗಳು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳ 24 ಲಕ್ಷ ಲಾರಿಗಳು ಮುಷ್ಕರದಲ್ಲಿ ಭಾಗವಹಿಸಲಿವೆ ಎಂದು ಹೇಳಿದ್ದಾರೆ.

