ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ನಡೆಯಬೇಕಿರುವ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ನಿಗದಿಪಡಿಸುವ ಬಗ್ಗೆ ಉತ್ತರಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಅಂತಿಮ ಗಡುವು ನೀಡಿದೆ.
ಚುನಾವಣೆ ಮೀಸಲಾತಿ ಅಧಿಸೂಚನೆ ಹೊರಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ ಪಿಐಎಲ್ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗಿಯ ಪೀಠದಲ್ಲಿ ಬುಧವಾರ ನಡೆದಿದೆ.
ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್. ಫಣೀಂದ್ರ, ರಾಜ್ಯದಲ್ಲಿ 187 ನಗರ ಸ್ಥಳೀಯ ಸಂಸ್ಥೆಗಳ ಅವಧಿ ಈಗಾಗಲೇ ಪೂರ್ಣಗೊಂಡಿದ್ದು, ಬಹುತೇಕ ಗ್ರಾಮ ಪಂಚಾಯಿತಿಗಳ ಅವಧಿ ಮಾಸಾಂತ್ಯದಲ್ಲಿ ಪೂರ್ಣಗೊಳ್ಳಲಿದೆ. ಸಕಾಲಕ್ಕೆ ಚುನಾವಣೆ ನಡೆಸಲು ಮೀಸಲಾತಿ ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಹೇಳಿದ್ದಾರೆ.
ಮೀಸಲಾತಿ ಸಿದ್ಧಪಡಿಸುವ ಬಗ್ಗೆ ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಅರ್ಜಿ ವಿಚಾರಣೆ ಅಲ್ಪಾವಧಿಗೆ ಮುಂದಾಡಬೇಕು ಎಂದು ಸರ್ಕಾರದ ಪರ ವಕೀಲರು ಮನವಿ ಮಾಡಿದ್ದು, ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಅರ್ಜಿಗೆ ಉತ್ತರಿಸಲು ಅಂತಿಮ ಕಾಲಾವಕಾಶ ನೀಡಿ ಫೆಬ್ರವರಿ 5ಕ್ಕೆ ವಿಚಾರಣೆ ಮುಂದೂಡಿದೆ.

