ವಿಜಯಪುರ: ಬಸ್ ಟಿಕೆಟ್ ದರ ಏರಿಕೆ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕರ್ನಾಟಕದ ಗಂಡಸರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತ ಹಾಕಬಾರದು ಎಂದು ಕರೆ ನೀಡಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಬಸ್ ಟಿಕೆಟ್ ದರ ಶೇ.15ರಷ್ಟು ಏರಿಕೆ ಮಾಡಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಣೆ ಮಾಡಿ, ಪುರುಷರಿಗೆ ಬಸ್ ಟಿಕೆಟ್ ದರ ಹೆಚ್ಚಳ ಮಾಡಿದ್ದಾರೆ. ಗಂಡಸರು ಏನು ಪಾಪ ಮಾಡಿದ್ದಾರೆ? ಎಂದು ಪ್ರಶ್ನಿಸಿದರು.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಮನೆಯ ಯಜಮಾನಿಯರಿಗೆ ಗೃಹಲಕ್ಷ್ಮೀ ಯೋಜನೆ. ಇದರಿಂದ ಗಂಡಸರಿಗೆ ಮಾತ್ರವಲ್ಲ ಮನೆಯ ಹೆಣ್ಣುಮಕ್ಕಳಿಗೂ ಅನ್ಯಾಯವಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತ ಹಾಕಬಾರದು ಎಂದು ಹೇಳಿದರು.
ಇದೇ ವೇಳೆ ಕಲಬುರಗಿಯಲ್ಲಿ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭಾಗಿಯಾಗಿಲ್ಲ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ್, ವಿಜಯೇಂದ್ರ ತಮ್ಮ ನೇತೃತ್ವದಲ್ಲಿ ಎಲ್ಲೆಡೆ ಪ್ರತಿಭಟನೆ ಎಂದು ಹೇಳಿಕೊಂಡಿದ್ದರು. ಪಾಪ ವಿಜಯೇಂದ್ರಗೆ ಏನು ಕೆಲಸ ಇತ್ತು ಗೊತ್ತಿಲ್ಲ. ನಿನ್ನೆ ಬಿಜೆಪಿಯಿಂದ ಮೂರು ರೀತಿ ಹೋರಾಟ ನಡೆದಿದೆ. ಒಂದು ವಕ್ಫ್ ವಿರುದ್ಧ ಹೋರಾಟ, ಇನ್ನೊಂದು ಪ್ರಿಯಾಂಕ್ ಖರ್ಗೆ ವಿರುದ್ಧ ಹೋರಾಟ ಮೂರನೆಯದು ಬಾಣಂತಿಯರ ಸಾವು ಖಂಡಿಸಿ ಹೋರಾಟ. ಇದರಲ್ಲಿ ಬಾಣಂತಿಯರ ಸಾವು ಖಂಡಿಸಿ ಹೋರಾಟದಲ್ಲಿ ಮಾತ್ರ ವಿಜಯೇಂದ್ರ ಭಾಗಿಯಾಗಿದ್ದಾರೆ. ಇದರಿಂದ ನಮ್ಮಲ್ಲಿ ಸಾಮೂಹಿಕ ನಾಯಕತ್ವ ಹೇಗಿದೆ ಎಂಬುದು ಗೊತ್ತಾಗುತ್ತದೆ ಎಂದು ವ್ಯಂಗ್ಯವಾಡಿದರು.