ಬೆಂಗಳೂರು: ಗ್ರಾಮೀಣ ಭಾಗದ ಅಸಂಘಟಿತ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಇ- ಶ್ರಮ್ ಕಾರ್ಡ್ ಯೋಜನೆ ಜಾರಿ ಮಾಡಿದೆ. ಗ್ರಾಮ ಪಂಚಾಯಿತಿಗಳಲ್ಲಿಯೂ ಇನ್ನು ಮುಂದೆ ಇ- ಶ್ರಮ್ ಕಾರ್ಡ್ ನೋಂದಣಿ ಸೌಲಭ್ಯ ಸಿಗಲಿದೆ.
ಅಸಂಘಟಿತ ಕಾರ್ಮಿಕರ ದತ್ತಾಂಶ ಸಂಗ್ರಹಿಸಿ ಕಾರ್ಮಿಕರಿಗೆ ಗರಿಷ್ಠ 2 ಲಕ್ಷ ರೂಪಾಯಿವರೆಗೆ ವಿಮೆ ಸೌಲಭ್ಯ ಒದಗಿಸುವ ಕಾರ್ಡ್ ನೋಂದಣಿಯನ್ನು ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಮಾಡಲಾಗುತ್ತಿತ್ತು. ಇನ್ನು ಮುಂದೆ ಗ್ರಾಮ ಪಂಚಾಯಿತಿಯಲ್ಲಿಯೂ ಈ ಸೌಲಭ್ಯ ಸಿಗಲಿದೆ.
ಕಾರ್ಮಿಕರ ನೋಂದಣಿಗೆ ತಂತ್ರಾಂಶ ಅಭಿವೃದ್ದಿಪಡಿಸಲಾಗಿದೆ. 379 ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಇ- ಪೋರ್ಟಲ್ ನಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಇಎಸ್ಐ ಮತ್ತು ಇಪಿಎಫ್ ಸೌಲಭ್ಯ ಇಲ್ಲದ ಆದಾಯ ತೆರಿಗೆ ಪಾವತಿಸದ ಅಸಂಘಟಿತ ಕಾರ್ಮಿಕರು ಉಚಿತವಾಗಿ ಇ- ಶ್ರಮ ಪೋರ್ಟಲ್ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.
ಈಗ ಗ್ರಾಮ ಪಂಚಾಯಿತಿಗಳಲ್ಲಿಯೂ ನೋಂದಾಯಿಸಿಕೊಂಡು ಸ್ಥಳದಲ್ಲಿ ಗುರುತಿನ ಚೀಟಿ ಪಡೆಯಬಹುದು. ಒಂದು ವರ್ಷಕ್ಕೆ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಪ್ರಯೋಜನ ಸಿಗಲಿದೆ. ಅಪಘಾತ ವಿಮೆ ಇದಾಗಿದ್ದು, ಮರಣ ಹೊಂದಿದಲ್ಲಿ, ಶಾಶ್ವತ ದುರ್ಬಲತೆ ಹೊಂದಿದ್ದಲ್ಲಿ ಎರಡು ಲಕ್ಷ ರೂಪಾಯಿ, ಭಾಗಶಃ ಅಂಗವೈಕಲ್ಯಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ಸಿಗಲಿದೆ.
ಉಚಿತವಾಗಿ ಇ- ಶ್ರಮ ಕಾರ್ಡ್ ಒದಗಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ ಸೂಚಿಸಿದೆ. 16 ರಿಂದ 59 ವರ್ಷದ ಕಟ್ಟಡ ಕಾರ್ಮಿಕರು, ಸಣ್ಣ, ಅತಿ ಸಣ್ಣ ರೈತರು, ಮೀನುಗಾರರು, ನೇಕಾರರು, ಬಡಗಿಗಳು, ಆಶಾ ಕಾರ್ಯಕರ್ತೆಯರು, ಮನೆ ಕೆಲಸದವರು, ಪತ್ರಿಕೆ ಮಾರಾಟಗಾರರು, ಇಎಸ್ಐ, ಪಿಎಫ್ ಸೌಲಭ್ಯ ಇಲ್ಲದವರು ಸೇರಿದಂತೆ 379 ವರ್ಗಗಳ ಅಸಂಘಟಿತ ಕಾರ್ಮಿಕರು ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಹೇಳಲಾಗಿದೆ.