ಬಹ್ರೈಚ್: ಉತ್ತರಪ್ರದೇಶ ಕತರ್ನಿಯಾಘಾಟ್ ವನ್ಯಜೀವಿ ಅಭಯಾರಣ್ಯದ ಪಕ್ಕದ ವಸತಿ ಪ್ರದೇಶದಲ್ಲಿ ಶನಿವಾರ ಆನೆಗಳು ಇಲ್ಲಿನ ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಕಾವಲುಗಾರನನ್ನು ತುಳಿದು ಕೊಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇವೇಶ್ವರ್(52) ಮೃತಪಟ್ಟವರು. ಅವರು ಅಭಯಾರಣ್ಯದ ಪಕ್ಕದಲ್ಲಿರುವ ಸುಜೌಲಿ ಪ್ರದೇಶದ ಗಿರ್ಜಾಪುರಿ ನೀರಾವರಿ ಕಾಲೋನಿಯಲ್ಲಿ ದಿನಗೂಲಿ ಕಾವಲುಗಾರರಾಗಿದ್ದರು.
ಗ್ರಾಮಸ್ಥರ ಪ್ರಕಾರ, ಶುಕ್ರವಾರ ರಾತ್ರಿ ಶೌಚಕ್ಕೆಂದು ಮನೆಯಿಂದ ಹೋದ ದೇವೇಶ್ವರ್ ತಡವಾಗಿಯಾದರೂ ಮನೆಗೆ ಹಿಂತಿರುಗಲಿಲ್ಲ, ಈ ಹಿನ್ನೆಲೆಯಲ್ಲಿ ಅವರ ಕುಟುಂಬ ಸದಸ್ಯರು ಆತನನ್ನು ಹುಡುಕಲಾರಂಭಿಸಿದರು.
ಕೆಲವರಿಗೆ ಕಾಡಿನ ಪೊದೆಗಳಲ್ಲಿ ಬಲಿಯಾದ ವ್ಯಕ್ತಿಯ ದೇಹ ಕಂಡು ಬಂದಿದೆ. ಕುಟುಂಬ ಸದಸ್ಯರು ತರಲು ಸ್ಥಳಕ್ಕೆ ತಲುಪಿದಾಗ, ಆನೆಗಳ ಹಿಂಡು ಪಕ್ಕದಲ್ಲೇ ಇತ್ತು ಎಂದು ಅರಣ್ಯ ರೇಂಜ್ ಅಧಿಕಾರಿ ಅನೂಪ್ ಕುಮಾರ್ ತಿಳಿಸಿದ್ದಾರೆ.
ಭಯಭೀತರಾದ ಗ್ರಾಮಸ್ಥರು ಶವವನ್ನು ಎತ್ತದೆ ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿ ನಂತರ ಶವವನ್ನು ಹೊರತೆಗೆದುಕೊಂಡು ಬರಲಾಗಿದೆ.
ಸ್ಥಳದಲ್ಲಿ ಆನೆಗಳ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಆನೆ ದಾಳಿಯಲ್ಲಿ ದೇವೇಶ್ವರ್ ಪ್ರಾಣ ಕಳೆದುಕೊಂಡಿರಬಹುದು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಗ್ರಾಮಸ್ಥರಿಗೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದ್ದು, ಈ ಪ್ರದೇಶದಲ್ಲಿ ಗಸ್ತು ಹೆಚ್ಚಿಸಲಾಗಿದೆ ಎಂದು ಅರಣ್ಯ ವಲಯಾಧಿಕಾರಿ ತಿಳಿಸಿದ್ದಾರೆ.