ಕೊಚ್ಚಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ರೋಡ್‌ಶೋನಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದರು. ಪ್ರಧಾನಿ ಮೋದಿ ತಮ್ಮ ಕಾರಿನಲ್ಲಿ ನಿಧಾನವಾಗಿ ಚಲಿಸುತ್ತಾ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನರತ್ತ ಕೈಬೀಸುತ್ತಾ ಠೀವಿಯಲ್ಲಿ ಸಾಗುವ ದೃಶ್ಯಾವಳಿಗಳು ದೇಶದೆಲ್ಲೆಡೆ ಭಾರೀ ವೈರಲ್ ಆಗಿವೆ.
ಇದೇ ವೇಳೆ ಪ್ರಧಾನಿಯ ಭದ್ರತಾ ವ್ಯವಸ್ಥೆ ನಿಭಾಯಿಸುವ ವಿಶೇಷ ಭದ್ರತಾ ಪಡೆ (ಎಸ್‌ಪಿಜಿ) ಎಂದಿಗಿಂತ ಇನ್ನೂ ಹೆಚ್ಚಿನ ನಿಗಾದಲ್ಲಿತ್ತು. ಪ್ರಧಾನಿ ನಡೆದು ಸಾಗುತ್ತಿದ್ದ ಸುತ್ತಲೂ ಎಸ್‌ಪಿಜಿ ಸಿಬ್ಬಂದಿ ಹದ್ದಿನಗಣ್ಣಿಟ್ಟಿದ್ದರು.
ಇದೇ ವೇಳೆ ಪ್ರಧಾನಿ ಮೇಲೆ ಹೂವಿನ ಮಳೆಗರೆಯುತ್ತಿದ್ದ ನಡುವೆಯೇ ಮೊಬೈಲ್ ಒಂದನ್ನು ಪ್ರಧಾನಿ ಬಳಿ ಎಸೆಯಲಾಯಿತು. ಕೂಡಲೇ ಇದನ್ನು ಗಮನಿಸಿದ ಎಸ್‌ಪಿಜಿ ಅಧಿಕಾರಿಯೊಬ್ಬರು ಅದನ್ನು ಅಲ್ಲೇ ತಡೆಗಟ್ಟಿದ್ದಾರೆ. ಪ್ರಧಾನಿಯತ್ತ ಹೂವು ಎಸೆಯುವ ವೇಳೆ ವ್ಯಕ್ತಿಯೊಬ್ಬರ ಕೈಯಿಂದ ಮೊಬೈಲ್ ಜಾರಿ ಹೀಗೆ ಹಾರಿಬಂತೆಂದು ತಿಳಿದು ಬಂದಿದೆ.
ತಿರುವನಂತಪುರಂ-ಕಾಸರಗೋಡಿನ ನಡುವೆ ಸಂಚರಿಸುವ ಕೇರಳದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಉದ್ಘಾಟನೆ ಹಾಗೂ ಕೊಚ್ಚಿ ಜಲ ಮೆಟ್ರೋದ ಲೋಕಾರ್ಪಣೆ ಮಾಡಲು ಪ್ರಧಾನಿ ಕೇರಳಕ್ಕೆ ಆಗಮಿಸಿದ್ದರು.