ಕಾಶಿಯಾತ್ರೆ ಮಾಡಬೇಕು ಅನ್ನೋದು ಬಹುತೇಕ ಎಲ್ಲಾ ಭಕ್ತರ ಬಯಕೆ. ಅಲ್ಲಿ ವಿಶ್ವನಾಥನ ದರ್ಶನ ಪಡೆದು, ಗಂಗಾ ಘಾಟ್‌ಗೆ ಭೇಟಿ ನೀಡಿ ಭಕ್ತರು ಪುನೀತರಾಗುತ್ತಾರೆ. ಕಾಶಿಗೆ ಬಂದವರೆಲ್ಲ ಒಮ್ಮೆ ಇಲ್ಲಿನ ಬನಾರಸಿ ಚಾಟ್ ಸವಿಯದಿದ್ದರೆ ಪ್ರಯಾಣ ಅಪೂರ್ಣವಾಗಿ ಉಳಿಯುತ್ತದೆ. ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ ಕೂಡ ಅದ್ಭುತ ಚಾಟ್ ಅನ್ನು ಸವಿದಿದ್ದಾರೆ.
ನೀತಾ ಅಂಬಾನಿ ತಮ್ಮ ಕಿರಿಯ ಮಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಲಗ್ನಪತ್ರಿಕೆಯೊಂದಿಗೆ ಕಾಶಿ ತಲುಪಿದ್ದರು. ಭೋಲೆನಾಥನ ದರ್ಶನ ಮತ್ತು ಗಂಗಾ ಆರತಿಯ ಬಳಿಕ ನೀತಾ ಅಂಬಾನಿ, ಗೊಡೌಲಿಯಾದ ಪ್ರಸಿದ್ಧ ಕಾಶಿ ಚಾಟ್ ಭಂಡಾರ್‌ಗೆ ಆಗಮಿಸಿದ್ದರು.
ಬನಾರಸ್‌ನ ಈ ಅಂಗಡಿಗೆ ಬಹಳ ದೊಡ್ಡ ಇತಿಹಾಸವಿದೆ. 1952ರಲ್ಲಿ ಕಾಶಿನಾಥ್ ಕೇಸರಿ ಇಲ್ಲೊಂದು ಪುಟ್ಟ ಅಂಗಡಿ ತೆರೆದು ಚಾಟ್ ಮಾರಾಟವನ್ನು ಪ್ರಾರಂಭಿಸಿದರು. ಜನರಿಗೆ ಅವರ ಕೈರುಚಿ ಬಹಳ ಇಷ್ಟವಾಯ್ತು. ಮೊದಮೊದಲು ಟೊಮೇಟೊ ಚಾಟ್ ತಯಾರಿಸುತ್ತಿದ್ದರು. ಅದೆಷ್ಟು ಜನಪ್ರಿಯವಾಯಿತೆಂದರೆ ಜನಸಾಗರವೇ ಸೇರತೊಡಗಿತು.
ಹೀಗೆ ದಿನಕಳೆದಂತೆ ಕಾಶಿನಾಥ ಕೇಸರಿ ಅವರ ಚಾಟ್ ಸೆಂಟರ್ ದೊಡ್ಡದಾಗಿ ಬೆಳೆದಿತ್ತು. 27 ವರ್ಷಗಳ ನಂತರ ಕಾಶಿನಾಥ್ ಕೇಸರಿ ಅವರು ತಮ್ಮ ಮೂವರು ಮಕ್ಕಳಾದ ದೀಪಕ್ ಕೇಸರಿ, ರಾಜೇಶ್ ಕೇಸರಿ ಮತ್ತು ರಾಕೇಶ್ ಕೇಸರಿಗೆ ಚಾಟ್ ಭಂಡಾರವನ್ನು ಹಸ್ತಾಂತರಿಸಿದರು. ಸದ್ಯ ಚಾಟ್ ಭಂಡಾರ ಬಹಳ ಪ್ರಸಿದ್ಧವಾಗಿದ್ದು, 12 ಬಗೆಯ ತಿನಿಸುಗಳು ಲಭ್ಯವಿದೆ. ಆದರೆ ಆಲೂ ಟಿಕ್ಕಿ ಮತ್ತು ಟೊಮೇಟೊ ಚಾಟ್‌ಗೆ ಬಹಳ ಬೇಡಿಕೆಯಿದೆ.
ಕಾಶಿ ಚಾಟ್ ಭಂಡಾರದ ಜನಪ್ರಿಯತೆ ಎಷ್ಟರಮಟ್ಟಿಗಿದೆ ಎಂದರೆ ಪ್ರತಿದಿನ ಸುಮಾರು 1200ಕ್ಕೂ ಹೆಚ್ಚು ಮಂದಿ ಇಲ್ಲಿಗೆ ಚಾಟ್ ಸವಿಯಲು ಬರುತ್ತಾರೆ. ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ರಾಜಕಾರಣಿಳು, ಸಿನೆಮಾ ತಾರೆಯರಿಗೆ ಕೂಡ ಇಲ್ಲಿನ ಚಾಟ್ ಫೇವರಿಟ್.
ಕಾಶಿ ತಲುಪಿದ ನೀತಾ ಅಂಬಾನಿ ಆಲೂ ಟಿಕ್ಕಿ ಮತ್ತು ಟೊಮೇಟೊ ಚಾಟ್ ಅನ್ನು ಸವಿದರು. ಅದರ ರುಚಿಯನ್ನು ಬಹಳ ಇಷ್ಟಪಟ್ಟರು. ಅಷ್ಟೇ ಅಲ್ಲ ತಮ್ಮ ಪತಿ ಮುಖೇಶ್ ಅಂಬಾನಿ ಅವರಿಗೆ ಕೂಡ ಈ ರುಚಿ ತುಂಬಾ ಇಷ್ಟವಾಗಲಿದೆ ಎಂದು ಹೇಳಿದರು. ಚಾಟ್‌ಗಳನ್ನು ತಯಾರಿಸುವ ವಿಧಾನವನ್ನು ಕೂಡ ಅವರು ಕಾಶಿ ಚಾಟ್ ಭಂಡಾರದ ಮಾಲೀಕರ ಬಳಿ ಕೇಳಿ ತಿಳಿದುಕೊಂಡಿದ್ದು ವಿಶೇಷ.