ಬೆಂಗಳೂರು: ಬೆಂಗಳೂರಿನಲ್ಲಿ ಟೆಕ್ಕಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಟೆಕ್ಕಿಯನ್ನು ಪೊಲೀಸರು ಪತ್ತೆಮಾಡಿದ್ದಾರೆ. ಆದರೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಕೆಲ ದಿನಗಳ ಹಿಂದೆ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಕಂಪನಿಯೊಂದರಲ್ಲಿ ಟೆಕ್ಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವಿಪಿನ್ ಗುಪ್ತಾ ಎಂಬುವವರು ನಾಪತ್ತೆಯಾಗಿದ್ದರು. ಕಂಗಾಲಾಗಿದ್ದ ಪತ್ನಿ, ಮಕ್ಕಳು ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಲ್ಲದೇ ಪತಿಯನ್ನು ಹುಡುಕಿಕೊಡಿ ಎಂದು ಮಹಿಳೆ ಕಣ್ಣೀರುಟ್ಟಿದ್ದರು. ಇದೀಗ ಈ ಪ್ರಕರಣಕ್ಕೆ ವಿಚಿತ್ರ ಟ್ವಿಸ್ಟ್ ಸಿಕ್ಕಿದೆ.
ನಾಪತ್ತೆಯಾಗಿದ್ದ ಟೆಕ್ಕಿ ವಿಪಿನ್ ಗುಪ್ತಾನನ್ನು ಪೊಲೀಸರು ನೊಯ್ಡಾದಲ್ಲಿ ಪತ್ತೆ ಮಾಡಿದ್ದಾರೆ. ನೊಯ್ಡಾದಿಂದ ಕರೆತಂದು ವಿಚಾರಣೆ ನಡೆಸಿದ್ದು, ಈ ವೇಳೆ ವಿಪಿನ್ ತಾನೇ ಮನೆ ಬಿಟ್ಟು ಹೋಗಿದ್ದಾಗಿ ತಿಳಿಸಿದ್ದಾನೆ.
ವಿಪಿನ್ ಹಾಗೂ ಆತನ ಪತ್ನಿ ನಡುವೆ ವಯಸ್ಸಿನ ಅಂತರವಿದೆ. ವಿಪಿನ್ ವಯಸ್ಸು 34 ವರ್ಷ, ಆದರೆ ಪತ್ನಿಗೆ 42 ವರ್ಷ. ಇದೇ ಕಾರಣಕ್ಕೆ ಪತ್ನಿ ವಿಪಿನ್ ಮೇಲೆ ಕಂಟ್ರೋಲ್ ಮಾಡುತ್ತಾಳಂತೆ. ಮಾನಸಿಕ ಹಿಂಸೆ ನೀಡುತ್ತಾಳಂತೆ. ಪತಿ ಕಂಟ್ರೋಲ್ ಗಾಗಿ ಮನೆಗೆ ಸಿಸಿಸಿಟಿವಿ ಕ್ಯಾಮರಾ ಅಳವಡಿಸಿದ್ದಾಳಂತೆ. ಪತ್ನಿಯ ನಡೆಯಿಂದ ಸಾಕಷ್ಟು ಮನನೊಂದು ಮನೆ ಬಿಟ್ಟು ಹೋಗಿದ್ದಾಗಿ ತಿಳಿಸಿದ್ದಾನೆ ಎಂದು ತಿಳಿದುಬಂದಿದೆ.
ವಿಪಿನ್ ಗುಪ್ತಾ ಉತ್ತರ ಪ್ರದೇಶದ ಲಖನೌ ಮೂಲದವರಾಗಿದ್ದು, ಕಳೆದ ಮೂರು ವರ್ಷಗಳಿಂದ ಪತ್ನಿಯೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದರು.