
ಬೆಂಗಳೂರು: ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಮುಗಿದರೂ ಶಿಕ್ಷಕರಿಗೆ ವರ್ಗಾವಣೆ ಭಾಗ್ಯ ಇಲ್ಲವಾಗಿದೆ. ಹೊಸ ಸರ್ಕಾರ ರಚನೆಯಾಗಿ ಸಚಿವ ಸಂಪುಟ ವಿಸ್ತರಣೆಯಾಗುವವರೆಗೂ ಶಿಕ್ಷಕರು ಕಾಯಬೇಕಿದೆ.
ಚುನಾವಣೆ ನೀತಿ ಸಂಹಿತೆ ಮುಗಿದ ಕೂಡಲೇ ವರ್ಗಾವಣೆ ನಡೆಯಬಹುದೆಂಬ ನಿರೀಕ್ಷೆಯಲ್ಲಿ ಶಿಕ್ಷಕರಿದ್ದಾರೆ. ಮೇ 13ರ ಫಲಿತಾಂಶ ಪ್ರಕಟವಾಗಿ ಹೊಸ ಸರ್ಕಾರ ರಚನೆಯಾಗಿ ಶಿಕ್ಷಣ ಸಚಿವರ ನೇಮಕವಾಗುವವರೆಗೂ ಶಿಕ್ಷಕರು ಕಾಯಬೇಕಿದೆ.
ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಕೊನೆಯ ಸಚಿವ ಸಂಪುಟ ಸಭೆಯಲ್ಲಿ ಚುನಾವಣಾ ಆಯೋಗದ ಅನುಮತಿ ಪಡೆದು ವರ್ಗಾವಣೆ ಕೈಗೊಳ್ಳಲು ತೀರ್ಮಾನಿಸಲಾಗಿತ್ತು. ನಂತರ ನೀತಿ ಸಂಹಿತೆ ಜಾರಿಯಾಗಿ ಚುನಾವಣಾ ಆಯೋಗಕ್ಕೆ ಪತ್ರ ಬರೆದ ಶಿಕ್ಷಣ ಇಲಾಖೆ ವರ್ಗಾವಣೆಗೆ ಅನುಮತಿ ಕೋರಿತ್ತು. ಆದರೆ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ವರ್ಗಾವಣೆ ಪ್ರಕ್ರಿಯೆ ಕೈಗೆತ್ತಿಕೊಳ್ಳದಂತೆ ಆಯೋಗ ಸೂಚಿಸಿತ್ತು. ಹೊಸ ಸರ್ಕಾರ ರಚನೆಯಾಗಿ ಶಿಕ್ಷಣ ಸಚಿವರ ನೇಮಕವಾಗುವವರೆಗೂ ಶಿಕ್ಷಕರ ವರ್ಗಾವಣೆ ವಿಳಂಬವಾಗಲಿದೆ ಎನ್ನಲಾಗಿದೆ.