ಮೈಸೂರು: ಹೃದಯಾಘಾತದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾದ ಚಾಮರಾಜನಗರ ಕ್ಷೇತ್ರದ ಸಂಸದ ಶ್ರೀನಿವಾಸ್ ಪ್ರಸಾದ್ ಅಂತ್ಯಕ್ರಿಯೆ ಇಂದು ಅಂಬೇಡ್ಕರ್ ಟ್ರಸ್ಟ್ ಆವರಣದಲ್ಲಿ ನಡೆಯಲಿದೆ.
ಹೆಚ್.ಡಿ. ಕೋಟೆ ರಸ್ತೆಯ ಸಿಲ್ಕ್ ಫ್ಯಾಕ್ಟರಿ ಸಮೀಪ ಇರುವ ಅಂಬೇಡ್ಕರ್ ಟ್ರಸ್ಟ್ ಆವರಣದಲ್ಲಿ ಸರ್ಕಾರಿ ಗೌರವದೊಂದಿಗೆ ಶ್ರೀನಿವಾಸ ಪ್ರಸಾದ್ ಅಂತ್ಯಕ್ರಿಯೆ ನೆರವೇರಿಸಲಾಗುವುದು. ಬೌದ್ಧ ಧರ್ಮದ ವಿಧಿ ವಿಧಾನದಂತೆ ಶ್ರೀನಿವಾಸ ಪ್ರಸಾದಂತೆ ಕ್ರಿಯೆ ನೆರವೇರಿಸಲಾಗುತ್ತದೆ.
ರಾಜ್ಯ ಹಾಗೂ ವರ ರಾಜ್ಯಗಳ ಬೌದ್ಧ ಭಿಕ್ಕುಗಳಿಂದ ಅಂತಿಮ ವಿಧಿ ವಿಧಾನ ನೆರವೇರಿಸಲಾಗುವುದು. ಪಂಚಶೀಲ ತತ್ವ ಬೋಧನೆ, ತ್ರಿಸರಣ ಮೂಲಕ ಅಂತ್ಯಕ್ರಿಯೆ ನೆರವೇರಲಿದೆ. 8 ಬೌದ್ಧ ಭಿಕ್ಕುಗಳು ಪಂಚಶೀಲ ತತ್ವ ಬೋಧನೆ ಮಾಡಲಿದ್ದಾರೆ. ಅಹಿಂಸೆ ಮತ್ತು ಸತ್ಯದ ಸಂದೇಶದ ಮೂಲಕ ವಿಧಿ ವಿಧಾನ ನೆರವೇರಿಸಲಾಗುವುದು. ಶ್ರೀನಿವಾಸ ಪ್ರಸಾದ್ ಬೌದ್ಧ ಧರ್ಮದ ಅನುಯಾಯಿಯಾಗಿದ್ದರಿಂದ ಆ ವಿಧಾನದಂತೆ ಅಂತ್ಯಕ್ರಿಯೆ ನೆರವೇರಲಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಗಣ್ಯರು ಶ್ರೀನಿವಾಸ ಪ್ರಸಾದ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.