ಪ್ಲಾಸ್ಟಿಕ್ ಮಾಲಿನ್ಯಕ್ಕೆ ಕಡಿವಾಣ ಹಾಕುವುದು ಅಸಾಧ್ಯ ಎಂಬ ಪರಿಸ್ಥಿತಿಯತ್ತ ನಾವೆಲ್ಲಾ ಅದಾಗಲೇ ತಲುಪಿದ್ದು, ಮುಂದಿನ ಪೀಳಿಗೆ ಪ್ಲಾಸ್ಟಿಕ್‌ಗಳನ್ನು ಪಳೆಯುಳಿಕೆಗಳನ್ನಾಗಿಯೂ ನೋಡಬೇಕಾಗಿ ಬರುತ್ತದೆ ಎಂದು ಹೇಳಿದರೆ ಅತಿಶಯೋಕ್ತಿಯೇನಲ್ಲ.
ಬ್ರೆಜ಼ಿಲ್‌ನ ಕರಾವಳಿ ಪ್ರದೇಶವೊಂದರಲ್ಲಿ ಕಂಡು ಬರುವ ಜ್ವಾಲಾಶಿಲೆಗಳು ಪ್ಲಾಸ್ಟಿಕ್‌ನೊಂದಿಗೆ ಬೆಸೆದುಕೊಂಡು ಹೊಸ ರೀತಿಯ ರಚನೆಗಳನ್ನು ಸೃಷ್ಟಿಸಿರುವುದು ಕಂಡು ಬಂದಿದೆ. ಇಲ್ಲಿನ ಟ್ರಿಂಡೇಡ್ ದ್ವೀಪದಲ್ಲಿ ಈ ವೈಚಿತ್ರ್ಯ ಕಂಡು ಬಂದಿದೆ.
ಈ ದ್ವೀಪವು ಆಮೆಗಳಿಗೆ ಗೂಡು ಕೊಟ್ಟಿ ಮರಿ ಮಾಡುವ ಜಾಗವಾಗಿದೆ. ಪ್ಲಾಸ್ಟಿಸ್ಟೋನ್ ಎಂದು ಈ ಕಲ್ಲಿಗೆ ಹೆಸರಿಟ್ಟಿದ್ದಾರೆ ಭೂವಿಜ್ಞಾನಿಗಳು.
ಜಗತ್ತಿನ ವಿವಿಧೆಡೆಗಳಲ್ಲೂ ಸಹ ಈ ಪ್ಲಾಸ್ಟಿಕ್ ಶಿಲೆಗಳು ಪತ್ತೆಯಾಗಿವೆ. ಕರಗಿರುವ ಪ್ಲಾಸ್ಟಿಕ್‌ನಲ್ಲಿ ಕಲ್ಲು, ಮರಳು ಹಾಗೂ ಇನ್ನಿತರ ತ್ಯಾಜ್ಯಗಳು ಗಟ್ಟಿಗೊಂಡು ಪ್ಲಾಸ್ಟಿಗ್ಲೋಮರೇಟ್ಸ್ ಸೃಷ್ಟಿಯಾಗಿರುವ ಅನೇಕ ನಿದರ್ಶನಗಳು ಹವಾಯಿಯಲ್ಲಿ ಭೂವಿಜ್ಞಾನಿಗಳ ಕಣ್ಣಿಗೆ ಪತ್ತೆಯಾಗಿವೆ. 2019ರಲ್ಲಿ ಇಂಗ್ಲೆಂಡ್‌ನ ನೈಋತ್ಯ ಕಡಲ ತೀರದಲ್ಲೂ ಸಹ ಪ್ಲಾಸ್ಟಿಕ್‌ನಿಂದ ರಚನೆಯಾದ ಪುಟ್ಟ ಪುಟ್ಟ ಕಲ್ಲುಗಳು ಪತ್ತೆಯಾಗಿದ್ದವು.
ಮಾನವರ ಚಟುವಟಿಕೆಗಳಿಂದ ದೂರವಿರುವ ಟ್ರಿಂಡೇಡ್ ದ್ವೀಪದಲ್ಲೂ ಸಹ ಹೀಗೆ ಪ್ಲಾಸ್ಟಿಕ್‌ನ ಪ್ರಭಾವವನ್ನು ಕಂಡ ಭೂವಿಜ್ಞಾನಿ ಫರ್ನಾಂಡಾ ಅವೆಲಾರ್ ಸ್ಯಾಂಟೋಸ್, ಈ ಪ್ಲಾಸ್ಟಿಕ್‌ಶಿಲೆಗಳು ಸಾಗರದಲ್ಲಿ ತೇಲಾಡುವ ಪ್ಲಾಸ್ಟಿಕ್‌ಗಳು ಅಲ್ಲಿಗೆ ಹೋಗಿ ಜಮೆಯಾಗಿ, ಪ್ರಾಕೃತಿಕ ಕ್ರಿಯೆಗಳಲ್ಲಿ ಲೀನಗೊಂಡು ಹೀಗೆ ರಚನೆಯಾಗಿವೆ ಎನ್ನುತ್ತಾರೆ.