ಬೆಂಗಳೂರು: ಬೆಂಗಳೂರಿನಲ್ಲಿ ಸಂಚಾರದ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಹೈಕೋರ್ಟ್ ಸೂಚನೆಯಂತೆ ಶಾಲಾ ಸಮಯ ಬದಲಾಗಿ ಕುರಿತಾಗಿ ಶಿಕ್ಷಣ ಇಲಾಖೆ ಮಹತ್ವದ ಸಭೆ ನಡೆಸಿದೆ.
ಶಾಲಾ ಸಮಯ ಬದಲಾವಣೆಗೆ ಸಭೆಯಲ್ಲಿ ವಿರೋಧ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ಶಾಲೆಗಳ ಕಾರ್ಯ ಚಟುವಟಿಕೆಗೆ ಪ್ರಸ್ತುತ ಇರುವ ಸಮಯದಲ್ಲಿ ಬದಲಾವಣೆ ಮಾಡುವುದು ಸರಿಯಲ್ಲ. ಸಮಯ ಬದಲಾವಣೆ ಮಾಡಿದಲ್ಲಿ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚಾಗುತ್ತದೆ. ಹೀಗಾಗಿ ಹಾಲಿ ಸಮಯವನ್ನೇ ಮುಂದುವರೆಸಬೇಕು ಎಂದು ಪೋಷಕರು, ಶಾಲೆಗಳ ಆಡಳಿತ ಮಂಡಳಿ ಸೇರಿದಂತೆ ಎಲ್ಲಾ ಭಾಗಿದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಇಲಾಖೆ ಬೆಂಗಳೂರಿನ ಶಾಲೆಗಳ ಸಮಯ ಪರಿಷ್ಕರಣೆ ಸಂಬಂಧ ಸಲಹೆ ಅಭಿಪ್ರಾಯಗಳನ್ನು ಪಡೆಯಲು ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಎಲ್ಲಾ ಭಾಗಿದಾರರು ಶಾಲಾ ಸಮಯದಲ್ಲಿ ಬದಲಾವಣೆ ಮಾಡಬಾರದು. ಸಂಚಾರದಟ್ಟಣೆ ಸಮಸ್ಯೆ ನಿವಾರಣೆಗೆ ಪರ್ಯಾಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯವನ್ನು ಇಂದು ಕೋರ್ಟ್ ಗೆ ತಿಳಿಸಲಿದ್ದು, ಕೋರ್ಟ್ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.