ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಚುನಾವಣಾ ನೀತಿ ಸಂಹಿತೆ ಮುಕ್ತಾಯವಾಗುತ್ತಿದ್ದಂತೆ 7ನೇ ರಾಜ್ಯವೇತನ ಆಯೋಗದ ಶಿಫಾರಸ್ಸಿನ ಅನ್ವಯ ವೇತನ, ಭತ್ಯೆ, ಸೌಲಭ್ಯಗಳನ್ನು ಪರಿಷ್ಕರಿಸಲಾಗುವುದು. ಶೇ. 8ರಿಂದ ಶೇ. 8.5 ರಷ್ಟು ವೇತನ ಹೆಚ್ಚಳ ನಿರೀಕ್ಷಿಸಲಾಗಿದ್ದು, ಒಟ್ಟಾರೆ ಮೂಲ ವೇತನದ ಶೇಕಡ 25 ರಿಂದ ಶೇಕಡ 25.5 ರಷ್ಟು ವೇತನ ಹೆಚ್ಚಳಕ್ಕೆ ಪ್ರಸ್ತಾವನೆ ಸಿದ್ಧವಾಗಿದೆ ಎಂದು ಹೇಳಲಾಗಿದೆ.
ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಸ್ವೀಕರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಅಧ್ಯಯನ ಮಾಡಿ ಸಲಹೆ ನೀಡಲು ಹಣಕಾಸು ಇಲಾಖೆಗೆ ಸೂಚಿಸಿದ್ದು, ಆಯೋಗದ ಶೇಕಡ 27.5 ರಷ್ಟು ವೇತನ ಹೆಚ್ಚಳ ಶಿಫಾರಸು ಬದಲಿಗೆ ಶೇಕಡ 25 ರಷ್ಟು ಏರಿಕೆ ಮಾಡಲು ಚಿಂತನೆ ನಡೆದಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ವಿಧಾನಸಭೆ ಚುನಾವಣೆಗೆ ಮೊದಲು ಶೇಕಡ 17ರಷ್ಟು ಮಧ್ಯಂತರ ವೇತನ ಹೆಚ್ಚಳ ಮಾಡಿತ್ತು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ 2024- 25 ನೇ ಸಾಲಿನ ಬಜೆಟ್ ನಲ್ಲಿ ಏಳನೇ ವೇತನ ಆಯೋಗದ ನಿರೀಕ್ಷಿತ ಶಿಫಾರಸುಗಳ ಅನುಷ್ಠಾನಕ್ಕಾಗಿ 15,431 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದ್ದಾರೆ.
ಚುನಾವಣೆ ನೀತಿ ಸಂಹಿತೆ ಮುಕ್ತಾಯವಾದ ನಂತರ ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರರ ವೇತನ ಹೆಚ್ಚಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎನ್ನಲಾಗಿದೆ.