ಬೆಂಗಳೂರು: ಸಮೀಪದಲ್ಲಿ ಬೇರೆ ಕಾಲೇಜುಗಳನ್ನು ಹೊಂದಿರದ ಗ್ರಾಮೀಣ ಪ್ರದೇಶದ ದ್ವಿತೀಯ ಪಿಯುಸಿ ಕಾಲೇಜುಗಳಲ್ಲಿಯೇ ಪ್ರಾಯೋಗಿಕ(ಪ್ರಾಕ್ಟಿಕಲ್) ಪರೀಕ್ಷೆ ನಡೆಯಲು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅವಕಾಶ ಕಲ್ಪಿಸಿದೆ. ಆದರೆ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳ ವಿದ್ಯಾರ್ಥಿಗಳು ಸಮೀಪದ ಬೇರೆ ಪರೀಕ್ಷಾ ಕೇಂದ್ರಗಳಲ್ಲಿ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಬೇಕೆಂದು ತಿಳಿಸಲಾಗಿದೆ.
ಲಿಖಿತ ಪರೀಕ್ಷೆ ಮಾದರಿಯಲ್ಲಿಯೇ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುವಂತೆ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಹೊರಡಿಸಿದ್ದ ಸುತ್ತೋಲೆಗೆ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಪರಿಷ್ಕೃತ ಸುತ್ತೋಲೆ ಹೊರಡಿಸಲಾಗಿದೆ.
ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳನ್ನು ಅಲ್ಲಿನ ಮೂಲಸೌಕರ್ಯ ಸಾಮರ್ಥ್ಯದ ಮೇಲೆ ಹಂಚಿಕೆ ಮಾಡಲಾಗುವುದು. ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳಿಗೆ ಟ್ಯಾಗ್ ಮಾಡಿದ ಕಾಲೇಜಿನ ವಿದ್ಯಾರ್ಥಿಗಳು ಈಗಾಗಲೇ ತಮ್ಮದಲ್ಲದ ಲ್ಯಾಬ್ ನಲ್ಲಿ ಪ್ರಾಯೋಗಿಕ ಪರೀಕ್ಷೆಗಳನ್ನು ಈ ಹಿಂದಿನಿಂದಲೂ ಬರೆಯುತ್ತಾ ಬಂದಿದ್ದಾರೆ. ಆದ್ದರಿಂದ ಪ್ರಾಯೋಗಿಕ ಕೇಂದ್ರವಿರುವ ಕಾಲೇಜಿನ ವಿದ್ಯಾರ್ಥಿಗಳನ್ನು ಸಮೀಪದ ಕಾಲೇಜಿಗೆ ಟ್ಯಾಗ್ ಮಾಡಬೇಕು. ಇದರಿಂದ ಹೊಸ ಪರೀಕ್ಷಾ ಕೇಂದ್ರದಲ್ಲಿ ಎಲ್ಲಾ ವಿದ್ಯಾರ್ಥಿಗಳು ಏಕರೂಪದ ವಾತಾವರಣದಲ್ಲಿ ಪರೀಕ್ಷೆ ಬರೆಯುವಂತಾಗುತ್ತದೆ.
ಟ್ಯಾಗ್ ಮಾಡಿದ ಕಾಲೇಜಿನ ವಿದ್ಯಾರ್ಥಿಗಳಿಗೆ ಅವರ ಕಾಲೇಜಿನ ಉಪನ್ಯಾಸಕರು ಆಂತರಿಕ ಪರೀಕ್ಷಕರಾಗಿರುತ್ತಾರೆ. ಆದ್ದರಿಂದ ಹೊಸ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಆತಂಕ ಉಂಟಾಗದಂತೆ ಗಮನಹರಿಸಬೇಕು ಎಂದು ಸೂಚನೆ ನೀಡಲಾಗಿದೆ.