ಬೆಂಗಳೂರು: ಸಾರಿಗೆ ಇಲಾಖೆಯ ಸರ್ವರ್ ಬುಧವಾರದಿಂದ ಸಂಪೂರ್ಣ ಡೌನ್ ಆಗಿದೆ. ಶನಿವಾರದವರೆಗೆ ಯಾವುದೇ ಸೇವೆಗಳು ಲಭ್ಯ ಇರುವುದಿಲ್ಲ ಎಂದು ಹೇಳಲಾಗಿದೆ.
ರಾಜ್ಯದ 71 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ(RTO)ಯಲ್ಲಿ ಬುಧವಾರದಿಂದ ಯಾವುದೇ ಸೇವೆಗಳು ಲಭ್ಯವಿಲ್ಲ. ಗುರುವಾರ ಮಧ್ಯಾಹ್ನದಿಂದ ಸೇವೆಗಳು ಲಭ್ಯವಿರುತ್ತವೆ ಎಂದು ಹೇಳಲಾಗಿತ್ತು. ನಂತರ ಶನಿವಾರದವರೆಗೆ ಸೇವೆಗಳು ಲಭ್ಯವಿರುವುದಿಲ್ಲ ಎಂದು ಹೇಳಲಾಗಿದೆ. ಈ ಬಗ್ಗೆ ಮಾಹಿತಿ ಇಲ್ಲದ ಸಾವಿರಾರು ಜನ ಸಾರಿಗೆ ಇಲಾಖೆ ಕಚೇರಿಗಳಿಗೆ ಅಲೆದಾಡುವಂತಾಗಿದೆ.
ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ವ್ಯಾಪ್ತಿಯ ಪರಿವಾಹನ್ ಸೇವಾ ಮತ್ತು ಸಾರಥಿ ವೆಬ್ಸೈಟ್ ಗಳಡಿಯಲ್ಲಿ ಸಾರಿಗೆ ಸೇವೆಗಳನ್ನು ತರಲಾಗಿದ್ದು, ಕೆಲವು ಸೇವೆಗಳನ್ನು ಆನ್ಲೈನ್ ಮೂಲಕ ಮಾತ್ರವೇ ಪಡೆದುಕೊಳ್ಳಬೇಕಿದೆ. ಸೇವೆಗಳನ್ನು ಆನ್ಲೈನ್ ಮತ್ತು ಆಫ್ಲೈನ್ ನಲ್ಲಿ ಪಡೆದುಕೊಂಡರೂ ಶುಲ್ಕ ಪಾವತಿಯನ್ನು ಮಾತ್ರ ವೆಬ್ಸೈಟ್ ಮೂಲಕವೇ ಪಾವತಿಸಬೇಕಿದೆ. ಸರ್ವರ್ ಡೌನ್ ಆಗಿರುವ ಕಾರಣ ಯಾವುದೇ ಸೇವೆ ಲಭ್ಯವಿರುವುದಿಲ್ಲ. ಮುಂದಿನ ಮೂರು ದಿನ ಆನ್ಲೈನ್ ನಲ್ಲಿ ಯಾವುದೇ ಸೇವೆ ಇರುವುದಿಲ್ಲ ಎಂದು ಹೇಳಲಾಗಿದೆ.
ಇದರಿಂದಾಗಿ ವಾಹನಗಳ ನೋಂದಣಿ, ಎಫ್.ಸಿ., ಎಲ್.ಎಲ್.ಆರ್., ಡಿಎಲ್, ಪ್ರಮಾಣ ಪತ್ರ ಸೇರಿದಂತೆ ವಿವಿಧ ಸೇವೆಗಳಿಗಾಗಿ ಪ್ರತಿದಿನ ಸಲ್ಲಿಕೆಯಾಗುವ ಅರ್ಜಿಗಳು ವಿಳಂಬವಾಗಿವೆ. ತಾಲೂಕು ಕೇಂದ್ರಗಳ ಆರ್‌ಟಿಓ ಕಚೇರಿಗಳಲ್ಲಿ ದಿನಕ್ಕೆ 150 ರಿಂದ 200, ಜಿಲ್ಲಾ ಕೇಂದ್ರಗಳ ಆರ್‌ಟಿಓ ಕಚೇರಿಗಳಲ್ಲಿ ಸುಮಾರು 400 ರಿಂದ 500 ಅರ್ಜಿಗಳು ಸಲ್ಲಿಕೆಯಾಗುತ್ತವೆ. ಬೆಂಗಳೂರು ಆರ್.ಟಿ.ಓ. ಕಚೇರಿಗಳಲ್ಲಿ ಒಂದು ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಸರ್ವರ್ ಸಮಸ್ಯೆ ಇರುವುದರಿಂದ ಶುಲ್ಕ ಪಾವತಿ, ಫೈಲ್ ಗಳ ಡೌನ್ಲೋಡ್ ಮೊದಲಾದ ಕಾರ್ಯ ಚಟುವಟಿಕೆಗಳಿಗೆ ಭಾರಿ ಹಿನ್ನಡೆಯಾಗಿದೆ. ಸಾರಿಗೆ ಇಲಾಖೆ ಸರ್ವರ್ ಅಪ್ಗ್ರೇಡ್ ಮಾಡಲು ಮುಂದಾಗಿದ್ದರಿಂದ ಇನ್ನು ಮೂರು ದಿನ ಸಾರಿಗೆ ಇಲಾಖೆಯ ಎಲ್ಲಾ ಸೇವೆಗಳು ಲಭ್ಯವಿರುವುದಿಲ್ಲ ಎಂದು ಹೇಳಲಾಗಿದೆ.