
ಬೆಂಗಳೂರು: ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣಗಳಲ್ಲಿ ಸಗಟು ಮಾರಾಟದೊಂದಿಗೆ ಚಿಲ್ಲರೆ ವಹಿವಾಟಿಗೂ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಪಿಎಂಸಿಗಳಲ್ಲಿ ಚಿಲ್ಲರೆ ವಹಿವಾಟಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ನಿಯಂತ್ರಣ ಮತ್ತು ಅಭಿವೃದ್ಧಿ ತಿದ್ದುಪಡಿ ಮಸೂದೆ -2025ಕ್ಕೆ ಅನುಮೋದನೆ ನೀಡಲಾಗಿದೆ.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಅವರು, ಬಜೆಟ್ ಅಧಿವೇಶನದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ತಿದ್ದುಪಡಿ ಮಸೂದೆ ಮಂಡಿಸಲಾಗುವುದು ಎಂದು ತಿಳಿಸಿದ್ದಾರೆ.
ಕೋರ್ಟ್ ನಿರ್ದೇಶನದ ಮೇರೆಗೆ ಚಿಲ್ಲರೆ ವಹಿವಾಟಿಗೆ ಅವಕಾಶ ಕಲ್ಪಿಸಬೇಕಿತ್ತು. ಇದಕ್ಕಾಗಿ ಮಸೂದೆಗೆ ತಿದ್ದುಪಡಿ ಅಗತ್ಯವಿದೆ. ಇದುವರೆಗೆ ಎಪಿಎಂಸಿಗಳಲ್ಲಿ ಸಗಟು ವಹಿವಾಟು ನಡೆಸಲು ಮಾತ್ರ ಅವಕಾಶ ಇತ್ತು. ಚಿಲ್ಲರೆ ವಹಿವಾಟಿಗೂ ಅವಕಾಶ ನೀಡುವುದರಿಂದ ಕೃಷಿ ಉತ್ಪನ್ನ ಮಾರುಕಟ್ಟೆಯ ವ್ಯಾಪ್ತಿ ವಿಸ್ತಾರವಾಗಲಿದೆ ಎಂದು ಹೇಳಿದ್ದಾರೆ.