ಬೆಂಗಳೂರು: ಗ್ರಾಮ ಆಡಳಿತಾಧಿಕಾರಿಗಳ ನೇಮಕಾತಿ ಬಗ್ಗೆ ಸರ್ಕಾರ ಅಧಿಸೂಚನೆ ಪ್ರಕಟಿಸಿದೆ. ಕರ್ನಾಟಕ ಸಾಮಾನ್ಯ ಸೇವೆಗಳ(ಕಂದಾಯ ಅಧೀನ ಶಾಖೆ, ಕೇಡರ್ ಮತ್ತು ನೇಮಕಾತಿ) ನಿಯಮಗಳು 1977ರ ತಿದ್ದುಪಡಿ ಮೂಲಕ ನೇಮಕ ಮಾಡಲಾಗುವುದು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಕರ್ನಾಟಕ ಲೋಕಸೇವಾ ಆಯೋಗ, ರಾಜ್ಯ, ಕೇಂದ್ರ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಅಥವಾ ರಾಜ್ಯಮಟ್ಟದ ಸಂಸ್ಥೆಗಳು ಕರ್ನಾಟಕ ಸಿವಿಲ್ ಸೇವೆಗಳ ನೇರ ನೇಮಕಾತಿ ಸಾಮಾನ್ಯ ನಿಯಮಗಳು 2021ರ ಪ್ರಕಾರ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುವುದು.
ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಪ್ರತಿ ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ ನಂತರ ಪ್ರೊಬೆಷನ್ ಅವಧಿಯಲ್ಲಿ ತರಬೇತಿ ಪಡೆಯಬೇಕು. ಆರು ತಿಂಗಳ ಅವಧಿಗೆ ಮೀರದ ಕೋರ್ಸ್ ಮತ್ತು ವರ್ಷದೊಳಗೆ ಸರ್ಕಾರ ನಿರ್ದಿಷ್ಟಪಡಿಸಿದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು ಎಂದು ಹೇಳಲಾಗಿದೆ.
ಕರಡು ಅಧಿಸೂಚನೆ ಪ್ರಕಟಿಸಲಾದ ದಿನಾಂಕದಿಂದ 15 ದಿನಗಳ ಒಳಗೆ ಆಕ್ಷೇಪಣೆ ಅಥವಾ ಸಲಹೆಗಳನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ, ಬಹು ಮಹಡಿ ಕಟ್ಟಡ, ಬೆಂಗಳೂರು-1 ಇಲ್ಲಿಗೆ ಸಲ್ಲಿಸಬಹುದಾಗಿದೆ.