ಕೃತಕ ಬುದ್ಧಿಮತ್ತೆಯ ನೆರವಿನಿಂದ ನಾವು ಮನಸ್ಸಿನಲ್ಲಿ ಕಲ್ಪಿಸಿಕೊಂಡಿದ್ದ ದೃಶ್ಯಗಳನ್ನು ಪರದೆಯ ಮೇಲೆ ಕಾಣುವುದು ಬಹಳ ಸರಳವಾಗಿದೆ. ರಾಮಾಯಣ, ಮಹಾಭಾರತದಂಥ ಅನ್ಯ ಯುಗದ ಕಥೆಗಳ ವರ್ಚುವಲ್ ಅವತಾರವನ್ನು ಸೃಷ್ಟಿಸಲು ಎಐನಿಂದ ಸಾಧ್ಯವಾಗಿದೆ.
ಇದೀಗ ಎಐ ಚಿತ್ರಗಳ ಮೂಲಕ ವ್ಯಕ್ತಿಯೊಬ್ಬರು ರಾಮಾಯಣದ ಅದ್ಭುತ ಸನ್ನಿವೇಶಗಳನ್ನು ಸೃಷ್ಟಿಸಿದ್ದಾರೆ. ಬೂಟ್‌ಪಾಲಿಶ್ ಟಾಕಿಸ್ ಹೆಸರಿನ ಕಂಪನಿಯೊಂದರ ಸ್ಥಾಪಕ ಹಾಗೂ ಕ್ರಿಯಾಶೀಲ ನಿರ್ದೇಶಕ ಸಚಿನ್ ಸ್ಯಾಮುಯೆಲ್ ಹಿಂದೂ ಪುರಾಣಕಥೆಯ ಅದ್ಭುತ ಸನ್ನಿವೇಶಗಳನ್ನು ಪರದೆ ಮೇಲೆ ತಂದಿದ್ದಾರೆ. ಬಾಲ್ಯದಿಂದಲೂ ಈ ಕಥೆಗಳು ತಮ್ಮನ್ನು ಭಾರೀ ಪ್ರಭಾವಗೊಳಿಸಿದ್ದಾಗಿ ತಿಳಿಸುವ ಸಚಿನ್, ಮಿಡ್‌ಜರ್ನಿ ಹೆಸರಿನ ಎಐ ಉಪಕರಣ ಬಳಸಿ ಪಾತ್ರಗಳ ಸ್ಕೆಚ್ ರಚಿಸಿದ್ದಾರೆ.
“ದಶರಥ, ಮಂತರಾ, ಕೈಕೇಯಿ, ರಾಮ, ಸೀತೆ, ಲಕ್ಷ್ಮಣ, ಹನುಮಂತ, ಮಾರೀಚ, ಸುಗ್ರೀವ, ರಾವಣರಂಧ ಅನೇಕ ಅದ್ಭುತ ಪಾತ್ರಗಳನ್ನು ರಾಮಾಯಣ ಒಳಗೊಂಡಿದೆ. ವಾಲಿ, ಇಂದ್ರಜಿತರಂಥ ಖಳನಾಯಕರೂ ಸಹ ತಮ್ಮ ಸಾವಿನ ಸಂದರ್ಭದಲ್ಲಿ ಕಣ್ಣೀರು ತರಿಸುತ್ತಾರೆ. ಈ ಮಹಾನ್ ಪುರಾಣದ ಶ್ರೇಷ್ಠತೆಯೇ ಅದು, ನೀವು ನಾಯಕರು ಹಾಗೂ ಖಳನಾಯಕರನ್ನು ಒಂದೇ ಮಟ್ಟದಲ್ಲಿ ಇಷ್ಟ ಪಡುತ್ತೀರಿ. ಭಾರತದ ಉದ್ದಗಲಕ್ಕೂ ನಿಮ್ಮನ್ನು ಕೊಂಡೊಯ್ಯುವ ದೃಶ್ಯಸಿರಿಯಾಗಿದೆ ರಾಮಾಯಣ,” ಎಂದು ತಿಳಿಸುತ್ತಾರೆ ಸಚಿನ್.