ಕಲಬುರ್ಗಿ: ಕ್ಯಾಟರ್ ಪಿಲ್ಲರ್ ಹುಳ ಕಚ್ಚಿದರೆ ಜನರು ಸಾಯುತ್ತಾರೆ ಎಂಬ ತಪ್ಪು ಮಾಹಿತಿ ನೀಡುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಆತಂಕವನ್ನುಂಟುಮಾಡಿದೆ.
ಕಲಬುರ್ಗಿ ಜಿಲ್ಲೆಯಲ್ಲಿ ಕೆಲ ಕಿಡಿಗೇಡಿಗಳು, ಜಮೀನಲ್ಲಿ ಇಬ್ಬರು ಸಾವನ್ನಪ್ಪಿದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು, ಕ್ಯಾಟರ್ ಪಿಲ್ಲರ್ ಹುಳ ಕಚ್ಚಿ ಸಾವನ್ನಪ್ಪಿದ್ದಾರೆ ಎಂಬ ರೀತಿಯಲ್ಲಿ ಬಿಂಬಿಸಿದ್ದಾರೆ.
ಈ ಕೀಟ ಕಚ್ಚಿದರೆ ಮನುಷ್ಯರು ಸಾಯುತ್ತಾರೆ ಎಂದು ಕ್ಯಾಟರ್ ಪಿಲ್ಲರ್ ಹುಳದ ಫೋಟೋ ಸಮೇತ ವಾಟ್ಸಾಪ್ ನಲ್ಲಿ ವದಂತಿ ಹಬ್ಬಿಸಿದ್ದಾರೆ.
ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸುತ್ತ ಮುತ್ತ ಇಂತಹ ವದಂತಿ ಹೆಚ್ಚಿದ್ದು, ಜನರು ಆತಂಕಕ್ಕೀಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಕ್ಯಾಟರ್ ಪಿಲ್ಲರ್ ಹುಳ ಯಾವುದೇ ಜೀವ ಹಾನಿ ಮಾಡಲ್ಲ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ವದಂತಿಗಳಿಗೆ ಕಿವಿಗೊಡಬೇಡಿ ಎಂದು ತಿಳಿಸಿದ್ದಾರೆ.