
ಕೋಲಾರ: ಇತ್ತೀಚಿನ ದಿನಗಳಲ್ಲಿ ನೋಟು ಬದಲಾವಣೆ ಮಾಡಿಕೊಡುವ ನೆಪದಲ್ಲಿ ವಂಚನೆ ಎಸಗುತ್ತಿರುವ ಪ್ರಕರಣ ಬೆಳಕಿಗೆ ಬರುತ್ತಿದೆ. ಪಿಂಕ್ ಟು ಗ್ರೀನ್ ಕರೆನ್ಸಿ ಬದಲಿಸಿಕೊಡುವುದಾಗಿ ಹೇಳಿ ವಂಚಕರ ತಂಡವೊಂದು 10 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೇಂದ್ರ ಸರ್ಕಾರ ಇತ್ತೀಚೆಗೆ 2000 ಮುಖಬೆಲೆಯ ನೋಟುಗಳ ಚಲಾವಣೆ ಹಿಂಪಡೆದಿರುವ ಹಿನ್ನೆಲೆಯಲ್ಲಿ ಈ ನೋಟುಗಳನ್ನು ಬದಲಿಸಿಕೊಡುವುದಾಗಿ ಹೇಳಿ ಸಾರ್ವಜನಿಕರನ್ನು ವಂಚಿಸುತ್ತಿರುವ ದಂಧೆ ಜೋರಾಗಿದೆ.
ಆಂಧ್ರಪ್ರದೇಶದ 6 ಜನರ ತಂಡ ಹಣ ಬದಲಾವಣೆ ಮಾಡಿಕೊಡುವ ನೆಪದಲ್ಲಿ ಆಗಸ್ಟ್ 17ರಂದು ಬರೋಬ್ಬರಿ 10 ಲಕ್ಷ ರೂಪಾಯಿ ವಂಚಿಸಿದೆ. ಕೋಲಾರದ ಶ್ರೀನಿವಾಸಪುರದ ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀ ಪುರ ಗ್ರಾಮದಲ್ಲಿ ಈ ಗ್ಯಾಂಗ್ ಹಣ ವರ್ಗಾವಣೆಗೆ ಸ್ಥಳ ನಿಗದಿ ಮಾಡಿತ್ತು. ಈ ವೇಳೆ ಮೊದಲ ಹಂತದಲ್ಲಿ ಹತ್ತು ಲಕ್ಷ ಹಣ ತಂದಿದ್ದ ವೇಳೆ ಹಣ ಲಪಟಾಯಿಸಿ ಗ್ಯಾಂಗ್ ಪರಾರಿಯಾಗಿದೆ.
ಆಂಧ್ರ ಪ್ರದೇಶದ ಚಿತ್ತೂರಿನ ರಾಮಾರೆಡ್ಡಿ ಹಾಗೂ ಭಾನು ಪ್ರಸಾದ್ ಅವರ ಬಳಿ ವ್ಯವಹಾರ ಕುದುರಿಸಿದ್ದ ತಂಡ 10% ಹಣ ಕೊಟ್ಟರೆ ಪಿಂಕ್ ಟು ಗ್ರೀನ್ ಕರೆನ್ಸಿ ಬದಲಾಯಿಸಿ ಕೊಡುವುದಾಗಿ ಹೇಳಿತ್ತು ಅದರಂತೆ ಮೊದಲ ಹಂತದಲ್ಲಿ ಹತ್ತು ಲಕ್ಷ ತಂದಿದ್ದ ವೇಳೆ ಗ್ಯಾಂಗ್, ಪೊಲೀಸರ ವೇಷದಲ್ಲಿ ಬಂದು ಹೆದರಿಸಿ ಹಣ ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ. ಹಣ ಕಳೆದುಕೊಂಡವರು ರಾವಲ್ಪಾಡಿ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ರಮೇಶ್ ಸೇರಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಮೂವರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ನಡೆದಿದೆ.