ಓಯೋ ತನ್ನ ಪಾರ್ಟ್ನರ್ ಹೋಟೆಲ್‌ಗಳಲ್ಲಿ ಹೊಸ ಚೆಕ್-ಇನ್ ನೀತಿಯನ್ನು ಜಾರಿಗೆ ತಂದಿದ್ದು, ಈ ವರ್ಷದಿಂದಲೇ ಜಾರಿಗೆ ಬಂದಿರುವ ಈ ನೀತಿಯ ಪ್ರಕಾರ, ಅವಿವಾಹಿತ ಜೋಡಿಗೆ ಈಗ ಹೋಟೆಲ್‌ನಲ್ಲಿ ಚೆಕ್-ಇನ್ ಮಾಡಲು ಅನುಮತಿಸುವುದಿಲ್ಲ. ಮೀರತ್ ನಲ್ಲಿ ಈ ನಿಯಮವನ್ನು ಈಗಾಗಲೇ ಜಾರಿಗೊಳಿಸಲಾಗಿದ್ದು, ಶೀಘ್ರದಲ್ಲೇ ಇತರ ನಗರಗಳಿಗೂ ವಿಸ್ತರಿಸುವ ಸಾಧ್ಯತೆ ಇದೆ.
ಸಂಬಂಧದ ಪುರಾವೆ ಕಡ್ಡಾಯ:
ಈ ಪರಿಷ್ಕೃತ ನೀತಿಯ ಪ್ರಕಾರ, ಎಲ್ಲಾ ಜೋಡಿಗಳು ಚೆಕ್-ಇನ್ ಸಮಯದಲ್ಲಿ ತಮ್ಮ ಸಂಬಂಧದ ಮಾನ್ಯ ಪುರಾವೆಯನ್ನು (ಉದಾಹರಣೆಗೆ, ವಿವಾಹ ಪ್ರಮಾಣಪತ್ರ) ಸಲ್ಲಿಸಬೇಕು. ಆನ್‌ಲೈನ್‌ನಲ್ಲಿ ಬುಕ್ ಮಾಡಿದ ಬುಕಿಂಗ್‌ಗಳಿಗೂ ಇದು ಅನ್ವಯಿಸುತ್ತದೆ. ಓಯೋ ತನ್ನ ಪಾರ್ಟ್ನರ್ ಹೋಟೆಲ್‌ಗಳಿಗೆ, ಸ್ಥಳೀಯ ಸಾಮಾಜಿಕ ಸೂಕ್ಷ್ಮತೆಯೊಂದಿಗೆ ಹೊಂದಿಕೆಯಾಗುವಂತೆ, ಇದರ ಆಧಾರದ ಮೇಲೆ ಜೋಡಿಗಳ ಬುಕಿಂಗ್ ನಿರಾಕರಿಸುವ ಅಧಿಕಾರವನ್ನು ನೀಡಿದೆ ಎಂದು ಕಂಪನಿ ಹೇಳಿದೆ.
ಓಯೋ ಮೀರತ್ ನ ತನ್ನ ಪಾರ್ಟ್ನರ್ ಹೋಟೆಲ್‌ಗಳಿಗೆ ಈ ಆದೇಶವನ್ನು ತಕ್ಷಣದಿಂದಲೇ ಜಾರಿಗೊಳಿಸುವಂತೆ ನಿರ್ದೇಶಿಸಿದೆ. ನೀತಿ ಬದಲಾವಣೆಯೊಂದಿಗೆ ಬರುವ ಪ್ರತಿಕ್ರಿಯೆಯ ಆಧಾರದ ಮೇಲೆ, ಕಂಪನಿ ಇದನ್ನು ಇನ್ನಷ್ಟು ನಗರಗಳಿಗೆ ವಿಸ್ತರಿಸಬಹುದಾಗಿದೆ.
ಓಯೋಗೆ ಈ ಹಿಂದೆ ಹಲವು ನಾಗರಿಕರಿಂದ, ವಿಶೇಷವಾಗಿ ಮೀರತ್ ನಿಂದ, ಈ ಸಮಸ್ಯೆಯನ್ನು ನಿಭಾಯಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವ ಪ್ರತಿಕ್ರಿಯೆಗಳು ಬಂದಿದ್ದವು. ಹೆಚ್ಚುವರಿಯಾಗಿ, ಕೆಲವು ಇತರ ನಗರಗಳ ನಿವಾಸಿಗಳು ಸಹ ಓಯೋ ಹೋಟೆಲ್‌ಗಳಲ್ಲಿ ಅವಿವಾಹಿತ ಜೋಡಿ ಚೆಕ್-ಇನ್ ಮಾಡುವುದನ್ನು ನಿಷೇಧಿಸುವಂತೆ ಕೋರಿದ್ದಾರೆ ಎಂದು ಹೇಳಲಾಗಿದೆ.