ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧೀಕಾರ (ಮುಡಾ)ದಲ್ಲಿ 50:50 ಅನುಪಾತದಲ್ಲಿ ಅಕ್ರಮ ನಡೆದಿದ್ದು, ಸಿಎಂ ಸಿದ್ದರಾಮಯ್ಯ ಪತ್ನಿಗೂ ಸೈಟ್ ಹಂಚಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮುಡಾದಲ್ಲಿ ನಡೆದಿರುವ ಭ್ರಷ್ಟಾಚಾರ ಬಿಜೆಪಿಯವರ ಕಾಲದಲ್ಲಿ ಆಗಿದ್ದು, 1 ಎಕರೆ 15 ಗುಂಟೆ ಜಮೀನು ನನ್ನ ಹೆಂಡತಿ ಹೆಸರಲ್ಲಿದೆ. ಈ ಜಮೀನನ್ನು ಬಾಮೈದ ತೆಗೆದುಕೊಂಡು ಅರಿಶಿನ-ಕುಂಕುಮ ರೀತಿಯಲ್ಲಿ ಉಡುಗೊರೆಯಾಗಿ ಕೊಟ್ಟಿದ್ದು. ನಾನು ಅಧಿಕಾರದಲ್ಲಿದ್ದಾಗ ಯಾವುದೇ ಜಮೀನು ಖರೀದಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾನೂನು ಪ್ರಕಾರ 50:50 ಅನುಮಾಪತದಲ್ಲಿ ಜಮೀನು ಕೊಡುವುದಾಗಿ ಮುಡಾ ಹೇಳಿದೆ. ಆದರೆ ಮುಡಾದವರು ಜಮೀನನ್ನು ಸೈಟ್ ಮಾಡಿ ಹಂಚಿಬಿಟ್ಟರು. ಹಂಚಿದ ಮೇಲೆ ನಮಗೆ ಜಮೀನು ಇಲ್ಲದ ಹಾಗೆ ಆಯ್ತು. ಹಾಗಾಗಿ ಮುಡಾದವರು ನಿಮಗೆ 50:50 ಅನುಪಾತದಲ್ಲಿ ಜಮೀನು ಕೊಡುತ್ತೆವೆ ಎಂದರು. ಅದಕ್ಕೆ ಬೇರೆ ಕಡೆ ಜಮೀನು ಕೊಟ್ಟರು. ಇದರಲ್ಲಿ ತಪ್ಪೇನಿದೆ? ಕಾನೂನು ಪ್ರಕಾರವೇ ನಮಗೆ ಜಮೀನು ಹಂಚಿದ್ದಾರೆ ಎಂದು ಹೇಳಿದರು.