ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾದಲ್ಲಿ ನಡೆದಿರುವ ಅಕ್ರಮ ಖಂಡಿಸಿ ವಿಪಕ್ಷ ಬಿಜೆಪಿ ಮೈಸೂರು ಚಲೋ ಪ್ರತಿಭಟನೆ ಹಮ್ಮಿಕೊಂಡಿದ್ದು, ಮುಡಾ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದೆ.
ಮೈಸೂರು ಮೂಡಾ ಕಚೇರಿ ಮುಂದೆ ಬಿಜೆಪಿ ಪ್ರತಿಭಟನೆ ನಡೆಸಿದ್ದು, ಬಿಜೆಪಿ ಪ್ರತಿಭಟನೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮುಡಾ ಕಚೇರಿ ಮುಂಭಾಗ ಹೈಡ್ರಾಮವೇ ಶುರುವಾಗಿದೆ. ಪ್ರತಿಭಟನೆ ವೇಳೆ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿಲ್ಲ. ಪೊಲೀಸರ ಕ್ರಮಕ್ಕೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಪ್ರಶ್ನೆ ಮಾಡಿದ್ದಾರೆ.
ಮೈಸೂರು ಕಮಿಷನರೇಟ್ ಪೊಲೀಸರ ವಿರುದ್ಧ ಕಿಡಿಕಾರಿದ ಎಂ.ಲಕ್ಷ್ಮಣ್, ನಮ್ಮನ್ನು ಬಂಧಿಸಿ, ನಮ್ಮನ್ನು ಬಂಧಿಸದೇ ಇನ್ ಸಲ್ಟ್ ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ನಿಮ್ಮ ಕಮಿಷ್ನರ್ ಎಲ್ಲಿ? ಎಂದು ಡಿಸಿಪಿ ಜಾಹ್ನವಿ ಅವರಿಗೆ ಆವಾಜ್ ಹಾಕಿದ್ದಾರೆ. ಕೆಪಿಸಿಸಿ ವಕ್ತಾರರು ಆವಾಜ್ ಹಾಕಿದರೂ ಪೊಲೀಸರು ಬಂಧಿಸಲು ಮುಂದಾಗಿಲ್ಲ. ಮುಡಾ ಕಚೇರಿ ಮುಂದೆ ನಾಟಕೀಯ ಪ್ರಸಂಗ ನಡೆದಿದ್ದು, ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರತಿಭಟನೆ ಕೈಬಿಡುವಂತೆ ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಿಲ್ಲಿಸಿದ್ದಾರೆ.