ಕೃಷಿಯಲ್ಲಿ ತೊಡಗಿಕೊಂಡವರಿಗೆ ತಮ್ಮ ಬೆಳೆಗೆ ನಿಶ್ಚಿತ ಬೆಲೆ ಲಭ್ಯವಾಗುವುದಿಲ್ಲವೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದರ ಜೊತೆಗೆ ಪ್ರಾಕೃತಿಕ ವಿಕೋಪಗಳಿಂದಲೂ ಬೆಳೆ ಕಳೆದುಕೊಳ್ಳುವುದು ಸರ್ವೇಸಾಮಾನ್ಯ. ಇಷ್ಟೆಲ್ಲಾ ಸಂಕಷ್ಟಗಳ ಮಧ್ಯೆಯೂ ಬಂದ ಬೆಳೆಯನ್ನು ಮಾರಾಟ ಮಾಡಲು ಮಾರುಕಟ್ಟೆಗೆ ಹೋದರೆ ಅಲ್ಲೊಂದು ರೀತಿಯ ಶೋಷಣೆ.
ಇದಕ್ಕೆ ತಾಜಾ ಉದಾಹರಣೆ ಒಂದು ಇಲ್ಲಿದ್ದು, 5 ಕ್ವಿಂಟಾಲ್ ಈರುಳ್ಳಿಯನ್ನು ಬೆಳೆದ ರೈತರೊಬ್ಬರು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ ಬಳಿಕ ಕೇವಲ ಎರಡೂವರೆ ರೂಪಾಯಿಯನ್ನು ಪಡೆದಿದ್ದಾರೆ. ಇಂತಹದೊಂದು ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಸೊಲ್ಲಾಪುರದ ರೈತ ರಾಜೇಂದ್ರ ಚೌಹಾಣ್ ಎಂಬುವರು ಹತ್ತು ಚೀಲದಲ್ಲಿ ತುಂಬಿದ್ದ 512 ಕೆಜಿ ಈರುಳ್ಳಿಯನ್ನು 70 ಕಿಲೋ ಮೀಟರ್ ದೂರದ ಮಾರುಕಟ್ಟೆಯ ದಲ್ಲಾಳಿ ಬಳಿ ಕಳುಹಿಸಿಕೊಟ್ಟಿದ್ದರು. ಕ್ವಿಂಟಲ್ ಗೆ 100 ರೂಪಾಯಿ ನೀಡುವುದಾಗಿ ಒಪ್ಪಂದ ಆಗಿದ್ದು, ಆ ಪ್ರಕಾರ ರಾಜೇಂದ್ರ ಅವರಿಗೆ 512 ರೂಪಾಯಿ ಕೊಡಬೇಕಿತ್ತು.
ಆದರೆ ಆ ಬಳಿಕ ತಗಾದೆ ತೆಗೆದ ದಲ್ಲಾಳಿ ಕಳಪೆ ಗುಣಮಟ್ಟದ ಈರುಳ್ಳಿ ಎಂದು ಹೇಳಿದ್ದಲ್ಲದೆ ಲೋಡಿಂಗ್, ಸಾರಿಗೆ, ಲೇಬರ್ ಹಾಗೂ ಇತರೆ ಶುಲ್ಕಗಳೆಂದು ಎಲ್ಲವನ್ನು ಕಡಿತಗೊಳಿಸಿದ ಬಳಿಕ ರಾಜೇಂದ್ರ ಅವರಿಗೆ ಎರಡೂವರೆ ರೂಪಾಯಿಗಳನ್ನು ನೀಡಿದ್ದಾನೆ.