ತಮಿಳು ಚಲನಚಿತ್ರ ʼವೆಲೈಯಿಲ್ಲ ಪಟ್ಟಧಾರಿʼ ಚಿತ್ರದ ಬ್ಯಾನರ್‌ನಲ್ಲಿ ಧೂಮಪಾನ ಮಾಡುತ್ತಿರುವ ಧನುಷ್ ಫೋಟೋವನ್ನು ಪ್ರದರ್ಶಿಸಿದ ಆರೋಪದ ಮೇಲೆ ಜನಪ್ರಿಯ ಚಿತ್ರನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ವಿರುದ್ಧದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ.
ಧನುಷ್, ಐಶ್ವರ್ಯ ಹಾಗೂ ಇತರೆ 3 ಮಂದಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎನ್. ಆನಂದ್ ವೆಂಕಟೇಶ್ ಅವರು ಅಂಗೀಕರಿಸಿದ್ದಾರೆ. ಮೂಲತಃ, ಎಸ್ ಸಿರಿಲ್ ಅಲೆಕ್ಸಾಂಡರ್ ಎಂಬುವರು ಸಲ್ಲಿಸಿದ ಖಾಸಗಿ ದೂರಿನ ಮೇರೆಗೆ, ಧನುಷ್ ಮತ್ತು ಐಶ್ವರ್ಯಾ ವಿರುದ್ಧ ವಿಚಾರಣೆಯನ್ನು ಆರಂಭಿಸಲಾಗಿತ್ತು.
ಈ ಅಧಿನಿಯಮವು, ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ ನಿಯಂತ್ರಣ, ಉತ್ಪಾದನೆ, ಪೂರೈಕೆ ಮತ್ತು ವಿತರಣೆ) ಕಾಯಿದೆಯ (COPTA) ಸೆಕ್ಷನ್ 5 ರ ವ್ಯಾಪ್ತಿಯೊಳಗೆ ತರಲು ಸಾಧ್ಯವಿಲ್ಲ. ಸಿಗರೇಟ್ ಅಥವಾ ಇತರ ಯಾವುದೇ ತಂಬಾಕು ಉತ್ಪನ್ನಗಳ ಉತ್ಪಾದನೆ, ಪೂರೈಕೆ ಅಥವಾ ವಿತರಣೆಯಲ್ಲಿ ತೊಡಗಿರುವ ವ್ಯಕ್ತಿಗಳು ಆ ಬ್ಯಾನರ್‌ನಲ್ಲಿ ಕಾಣಿಸಿಕೊಂಡಿಲ್ಲ ಎಂದು ನ್ಯಾಯಾಧೀಶರು ಹೇಳಿದರು.
ಬ್ಯಾನರ್‌ನಲ್ಲಿ ಕಾಣಿಸಿಕೊಂಡಿರುವ ಧನುಶ್ ಸಿಗರೇಟ್ ಅಥವಾ ಇನ್ನಿತರೆ ಯಾವುದೇ ತಂಬಾಕು ಸಂಬಂಧಿ ಉತ್ಪನ್ನಗಳ ಉತ್ಪಾದನೆ, ಪೂರೈಕೆ ಅಥವಾ ವಿತರಣೆಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಯೊಡನೆ ಸಂಬಂಧ ಹೊಂದಿಲ್ಲ. ಅಥವಾ ಅವರು ಪ್ರಚಾರವನ್ನೂ ಮಾಡುತ್ತಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.