ಹಳೆ ದ್ವೇಷದ ಹಿನ್ನೆಲೆಯಲ್ಲಿ ಬುಡಕಟ್ಟು ಜನಾಂಗದ ವ್ಯಕ್ತಿಯನ್ನು ಅದೇ ಗ್ರಾಮದ ಕೆಲವರು ಹತ್ಯೆ ಮಾಡಿದ್ದು, ಆಕ್ರೋಶಗೊಂಡ ಕುಟುಂಬಸ್ಥರು ಹಾಗೂ ಸಂಬಂಧಿಕರು ರಸ್ತೆ ತಡೆ ನಡೆಸಿ ಬಳಿಕ ಆರೋಪಿ ಮನೆ ಮುಂದೆಯೇ ಬಲವಂತವಾಗಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಇಂತಹದೊಂದು ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಕೋಥಾ ಗ್ರಾಮದಲ್ಲಿ ನಡೆದಿದ್ದು, ಸೋಮವಾರ ರಾತ್ರಿ ಪೂಲ್ ಚಂದ್ ಎಂಬಾತನನ್ನು ಅದೇ ಗ್ರಾಮದ ಕೆಲವರು ಹಳೆ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ಮಾಡಿದ್ದರು.
ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ರಸ್ತೆ ತಡೆ ನಡೆಸಿ ಕುಟುಂಬಸ್ಥರು ಹಾಗೂ ಸಂಬಂಧಿಕರು ಪ್ರತಿಭಟನೆ ನಡೆಸಿದ್ದು, ಬಳಿಕ ಅಂತ್ಯಕ್ರಿಯೆಗಾಗಿ ಶವವನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗುತ್ತಿದ್ದರು.
ಮೆರವಣಿಗೆ ಆರೋಪಿ ಮನೆ ಮುಂದೆ ಬಂದಾಗ ಕುಟುಂಬಸ್ಥರ ಆಕ್ರೋಶ ಮತ್ತಷ್ಟು ಹೆಚ್ಚಾಗಿದ್ದು, ಪೊಲೀಸರ ವಿರೋಧದ ನಡುವೆಯೂ ಅಲ್ಲಿಯೇ ಮೃತನ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಇದೀಗ ಪೊಲೀಸರು ಎರಡೂ ಘಟನೆಗಳ ಕುರಿತಂತೆ ಪ್ರಕರಣ ದಾಖಲಿಸಿ ಆರೋಪಿಗಳ ಬಂಧನಕ್ಕೆ ಮುಂದಾಗಿದ್ದಾರೆ.