ಶಿವಮೊಗ್ಗ: ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ನಲ್ಲಿ ಬಂದ ಜಾಹೀರಾತು ನಂಬಿದ ಭದ್ರಾವತಿಯ ಉಪನ್ಯಾಸಕರೊಬ್ಬರು 13.33 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಮೊದಲಿಗೆ ವಿಡಿಯೋ ರಿವ್ಯೂಗೆ 120 ರೂಪಾಯಿ ಕೊಡುವುದಾಗಿ ಮಹಿಳೆಯೊಬ್ಬರು ಹೇಳಿದ್ದು, ಹಣ ಕಳುಹಿಸಿದ್ದರು. ನಂತರ ವಿವಿಧ ಟಾಸ್ಕ್ ಪೂರ್ಣಗೊಳಿಸಿದರೆ ಹಣ ನೀಡುವುದಾಗಿ ಹೇಳಿದ್ದರು. 1,000 ಹೂಡಿಕೆ ಮಾಡಿ ಟಾಸ್ಕ್ ಪೂರೈಸಿದ ಉಪನ್ಯಾಸಕನ ಖಾತೆಗೆ 1,300 ರೂ. ಬಂದಿತ್ತು.
ಹಣ ಬಂದು ನಂಬಿಕೆ ಹೆಚ್ಚಾಗಿದ್ದರಿಂದ ಉಪನ್ಯಾಸಕ ವಿವಿಧ ಹಂತದಲ್ಲಿ ಟಾಸ್ಕ್ ಪೂರ್ಣಗೊಳಿಸಲು 13.33 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರು. ಟಾಸ್ಕ್ ಪೂರ್ಣಗೊಳಿಸಿದರೂ ಹಣ ಮರಳಿ ಬಾರದೆ ಇರುವುದನ್ನು ಗಮನಿಸಿದ ಉಪನ್ಯಾಸಕ ವಿಚಾರಿಸಿದ್ದಾರೆ. ಈ ವೇಳೆ ವಂಚಕರು ಬ್ಯಾಂಕ್ ಖಾತೆ ಫ್ರೀಜ್ ಆಗಿದೆ. ದೊಡ್ಡ ಮೊತ್ತದ ಹಣ ವರ್ಗಾವಣೆಗೆ ಲಾರ್ಜ್ ಆಕ್ಟಿವೇಶನ್ ಚಾರ್ಜ್ ಪಾವತಿಸಬೇಕಿದೆ ಎಂದೆಲ್ಲ ಸಬೂಬು ಹೇಳಿದ್ದಾರೆ.
ಕೊನೆಗೆ ಹಣ ಕಳೆದುಕೊಂಡು ಮೋಸ ಹೋಗಿರುವುದು ಗೊತ್ತಾಗಿ ಉಪನ್ಯಾಸಕ ಶಿವಮೊಗ್ಗದ ಸಿಇಎನ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.