ಕೊಡಗು: ರಾಜ್ಯಾದ್ಯಂತ ವರುಣಾರ್ಭಟ ಜೋರಾಗಿದ್ದು, ಕೊಡಗು ಜಿಲ್ಲೆಯಲ್ಲಿ ಸತತವಾಗಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ.
ಕೊಡಗು ಜಿಲ್ಲಾಧಿಕಾರಿ ಡಾ. ವೆಂಕಟರಾಜಾ, ಜಿಲ್ಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಭಾರಿ ವಾಹನ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ರಸ್ತೆ ಕುಸಿತ ತಡೆಯುವ ನಿಟ್ಟಿನಲ್ಲಿ ಅಧಿಕ ಭಾರದ ವಾಹನಗಳ ಸಂಚಾರಕ್ಕೆ ನಿರ್ಬಂಧಿಸಲಾಗಿದೆ. ಸರಕು ವಾಹನಗಳ ನಿತ್ಯಸಂಚಾರದಿಂದಾಗಿ ರಸ್ತೆಬದಿಯ ಮಣ್ಣು ಕುಸಿದು ಅವಾಂತಗಳು ಸೃಷ್ಟಿಯಾಗುತ್ತಿವೆ. ಅಪಘಾತಗಳು ಸಂಭವಿಸುತ್ತಿವೆ. ಈ ನಿಟ್ಟಿನಲ್ಲಿ ಭಾರಿ ವಾಹನ ನಿಷೇಧಿಸಲಾಗಿದೆ.
ಮರಳು, ಮರದ ಧಿಮ್ಮಿ ಸಾಗಾಣಿಕೆ ಲಾರಿ ಸಂಚಾರಕ್ಕೂ ಅವಕಶವಿಲ್ಲ. 18,500 ಕೆಜಿಗಿಂತ ಅಧಿಕ ಭಾರದ ವಾಹನ ಸಂಚಾರಕ್ಕೆ ನಿಷೇಧಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಗಡಿಯಲ್ಲಿ 24 ಗಂಟೆಗಳ ಕಾಲ ತೀವ್ರ ನಿಗಾ ವಹಿಸಲಾಗಿದೆ. ಸಾರಿಗೆ ಹಾಗೂ ಪೊಲೀಸ್ ಸಿಬ್ಬಂದಿಗಳು ಹೆದ್ದಾರಿಯಲ್ಲಿ ಪೆಟ್ರೊಲಿಂಗ್ ನಡೆಸುತ್ತಿದ್ದಾರೆ. ಹಾಲು, ಇಂಧನ, ಅನಿಲ ಪೂರೈಕೆ ವಾಹನಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ.