
2018ರಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದ ಸುನೀಲ್ ಕನುಗೋಳು ಈ ಬಾರಿ ವಿನೂತನ ಪ್ರಚಾರ ಕಾರ್ಯತಂತ್ರಗಳನ್ನು ರೂಪಿಸಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಪ್ರಭಾವಿಯಾಗಿದ್ದರು. ಕೆಲವರನ್ನು ಹೊರತುಪಡಿಸಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಪ್ರಾಥಮಿಕವಾಗಿ ಸುನಿಲ್ ಕನುಗೋಳು ಅವರ ತಂಡ ನಡೆಸಿದ ಸಮೀಕ್ಷೆಗಳ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ.
ಈ ಚುನಾವಣಾ ತಂತ್ರಗಾರನನ್ನು ಕಳೆದ ವರ್ಷ ಮಾರ್ಚ್‌ನಲ್ಲಿ ಕಾಂಗ್ರೆಸ್ ನೇಮಿಸಿಕೊಂಡಿತ್ತು. ಎರಡು ತಿಂಗಳ ನಂತರ ಸೋನಿಯಾ ಗಾಂಧಿಯವರು ಸುನಿಲ್ ಕನುಗೋಳ ಅವರನ್ನು ಪಕ್ಷದ 2024 ರ ಲೋಕಸಭಾ ಚುನಾವಣಾ ಕಾರ್ಯಪಡೆಯ ಸದಸ್ಯರನ್ನಾಗಿ ನೇಮಿಸಿದರು.
ಸುನಿಲ್ ಕನುಗೋಳ ಇತ್ತೀಚಿನ ವರ್ಷಗಳಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆಯೊಂದಿಗೆ ಕೆಲಸ ಮಾಡಿದ್ದಾರೆ.
ಈ ಹಿಂದೆ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರೊಂದಿಗೆ ಕೆಲಸ ಮಾಡಿದ್ದ ಸುನಿಲ್ ಕನುಗೋಳ 2014 ರಲ್ಲಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರದಲ್ಲಿ ಪ್ರಮುಖ ಭಾಗವಾಗಿದ್ದರು ಮತ್ತು ಬಿಜೆಪಿಯ ಅಸೋಸಿಯೇಷನ್ ಆಫ್ ಬಿಲಿಯನ್ ಮೈಂಡ್ಸ್ (ಎಬಿಎಂ) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.
ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಗುಜರಾತ್ ಮತ್ತು ಕರ್ನಾಟಕದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರಗಳಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದರು.
ಯಾರು ಈ ಚುನಾವಣಾ ಚತುರ ಸುನಿಲ್ ಕನುಗೋಳ ?
ಕರ್ನಾಟಕದವರಾದ ಸುನಿಲ್ ಕನುಗೋಳು ಚೆನ್ನೈನಲ್ಲಿ ಬೆಳೆದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯೋಜಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ನಿರ್ಣಾಯಕ ಚುನಾವಣೆಗೆ ಮುನ್ನ ಕಾಂಗ್ರೆಸ್ ಜನರೊಂದಿಗೆ ಸಂಪರ್ಕ ಸಾಧಿಸಲು ಯಾತ್ರೆ ಸಹಾಯ ಮಾಡಿತು.
ಮುಂಬರುವ ಯೋಜನೆಗಳಲ್ಲಿ ತೆಲಂಗಾಣದಲ್ಲಿ ಕಾಂಗ್ರೆಸ್‌ನ ರಾಜಕೀಯ ಭವಿಷ್ಯವನ್ನು ಮರುಸ್ಥಾಪಿಸುವುದು, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಸರ್ಕಾರವನ್ನು ಉಳಿಸಿಕೊಳ್ಳುವುದು, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅನ್ನು ಗೆಲುವಿನತ್ತ ಕೊಂಡೊಯ್ಯುವುದು ಸುನಿಲ್ ಕನುಗೋಳ ಅವರ ಟಾರ್ಗೆಟ್.
ಇದರೊಂದಿಗೆ ಮುಖ್ಯವಾಗಿ ಕಾಂಗ್ರೆಸ್ ಅನ್ನು 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿ.ಜೆ.ಪಿ. ವಿರುದ್ಧ ಪ್ರಬಲ ಮತ್ತು ಗೆಲ್ಲುವ ಸ್ಪರ್ಧಿಯನ್ನಾಗಿ ಮಾಡುವುದು ಸುನಿಲ್ ಕನುಗೋಳ ಅವರ ಪ್ರಮುಖ ಕಾರ್ಯಯೋಜನೆಯಾಗಿದೆ.