ಬೆಂಗಳೂರು: ಅಕ್ರಮವಾಗಿ ಭೂ ಮಂಜೂರಾತಿ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬೇಲೂರು ಶಾಸಕ ಕೆ.ಎಸ್. ಲಿಂಗೇಶ್ ಅವರ ವಿರುದ್ಧ ತನಿಖೆಗೆ ಆದೇಶ ನೀಡಲಾಗಿದೆ.
ಬೇಲೂರು ಪೊಲೀಸರಿಗೆ ಜನಪ್ರತಿನಿಧಿಗಳ ಕೋರ್ಟ್ ನಿಂದ ಈ ಕುರಿತಾಗಿ ನಿರ್ದೇಶನ ನೀಡಲಾಗಿದೆ. ಹಾಸನ ಜಿಲ್ಲೆ ಬೇಲೂರು ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಎಸ್. ಲಿಂಗೇಶ್ 2750 ಎಕರೆ ಸರ್ಕಾರಿ ಜಮೀನು ಅನರ್ಹರಿಗೆ ಹಂಚಿಕೆ ಮಾಡಿದ ಆರೋಪ ಕೇಳಿ ಬಂದಿದೆ. ನಕಲಿ ದಾಖಲೆ ಸೃಷ್ಟಿಸಿ ಜಮೀನು ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಕೋಲಾರ ನಿವಾಸಿ ಕೆ.ಸಿ. ರಾಜಣ್ಣ ಖಾಸಗಿ ದೂರು ದಾಖಲಿಸಿದ್ದರು. ಮಾವಿನಕೆರೆ, ಬಂಟೆನಹಳ್ಳಿ, ಡನಾಯಕನಹಳ್ಳಿ, ಮೆದಿಕೆರೆ, ರಾಯಪುರದ ನೂರಾರು ಕೋಟಿ ರೂಪಾಯಿ ಬೆಲೆಬಾಳುವ ಜಮೀನು ಹಂಚಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ.
2016ರ ಅಕ್ಟೋಬರ್ 28 ರಿಂದ 2022ರ ಡಿಸೆಂಬರ್ 11ರ ಮಧ್ಯೆ ಅಕ್ರಮ ಮಂಜೂರಿನಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ ಆರೋಪ ಕೇಳಿ ಬಂದಿದೆ. ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಮೂರ್ತಿ ಜೆ. ಪ್ರೀತ್ ಆದೇಶ ಹೊರಡಿಸಿದ್ದಾರೆ.