ಮಂಡ್ಯ: ಮಂಡ್ಯದ ಹಾಡ್ಯಾ ಗ್ರಾಮದ ಆಲೆಮನೆಯಲ್ಲಿ ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್.ಅಶೋಕ್ ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ವೇಳೆ ಡಿಹೆಚ್ ಒ ಡಾ.ಮೋಹನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಕರಣ ನಡೆದು ಇಷ್ಟುದಿನವಾದರೂ ಇನ್ನೂ ಜಮೀನು ಮಾಲೀಕನ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ? ಆಲೆಮನೆ ಯಾಕೆ ಸೀಜ್ ಮಾಡಿಲ್ಲ? ಜಮೀನಿನ ಗುರುತು ಯಾಕೆ ಮಾಡಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಹಾಡ್ಯಾ ಗ್ರಾಮಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಭ್ರೂಣಲಿಂಗ ಪತ್ತೆ ಮಾಡುತ್ತಿದ್ದ ಜಾಗಕ್ಕೆ ಭೇಟಿ ನೀಡಿದ್ದೇನೆ. ಆಲೆಮನೆ ಯಥಾಪ್ರಕಾರ ನಡೆಯುತ್ತಿದೆ. ಸ್ಥಳ ಮಹಜರು ಮಾಡಿ ಸರ್ಕಾರದ ಸೀಲ್ ಹಾಕಬೇಕಿತ್ತು. ಆದರೆ ಈ ಜಾಗದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಸಾಕ್ಷಿಗಳು ನಾಶವಾಗಿವೆ. ಕೋರ್ಟ್ ಗೆ ಬೇಕಾದ ಎವಿಡೆನ್ಸ್ ಕೂಡ ಸಿಗಲ್ಲ ಇಲ್ಲಿ. ಪೊಲೀಸರ ನಿರ್ಲಕ್ಷ್ಯ ಸ್ಪಷ್ಟವಾಗಿದೆ ಎಂದು ವಾಗ್ದಾಳಿ ನಡೆಸಿದರು.