ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ಬಂಧನವಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ. ಈ ಬಗ್ಗೆ ಪತ್ರಕರ್ತ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇಂದ್ರಜಿತ್ ಲಂಕೇಶ್, ಕೊಲೆಯಾದ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ಅಲ್ಲದೇ ವಿಜಯಲಕ್ಷ್ಮಿ ಹಾಗೂ ಅವರ ಮಗನಿಗೆ ಕೂಡ ದೇವರು ಶಕ್ತಿ ನೀಡಲಿ ಎಂದು ಹೇಳಿದ್ದಾರೆ.
ನಾನು ದರ್ಶನ್ ಗೆ ಟಾಂಗ್ ನೀಡಿಲ್ಲ. ಪತ್ರಕರ್ತನಾಗಿ ನಾನು ಕೆಲ ವಿಚಾರವಾಗಿ ಧ್ವನಿ ಎತ್ತಿದ್ದೇನೆ ಅಷ್ಟೇ. ಅದನ್ನು ಹೊರತುಪಡಿಸಿ ನಮ್ಮ ನಡುವೆ ಬೇರೇನೂ ಇಲ್ಲ ಎಂದರು.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ನಾನು ಏನನ್ನೂ ಹೇಳಲ್ಲ. ತನಿಖೆ ನಡೆಯುತ್ತಿದೆ ಎಂದು ಹೇಳಿದರು. ಸೋಷಿಯಲ್ ಮೀಡಿಯಾ ಅದ್ಭುತ ಮಾಧ್ಯಮ. ಆದರೆ ಇತ್ತೀಚಿನ ದಿನಗಳಲ್ಲಿ ಅದು ಬಹಳ ಕೆಟ್ಟದಾಗಿ ಬಳಕೆಯಾಗುತ್ತಿದೆ. ಯುವ ಜನತೆ ಹಾಳಾಗುತ್ತಿದೆ. ಸರ್ಕಾರ ಹಾಗೂ ಸೈಬರ್ ಕ್ರೈಂ ವಿಭಾಗದವರು ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.