ನವದೆಹಲಿ: ಅಮೆರಿಕ ಸತತ ಎರಡನೇ ವರ್ಷವೂ ಭಾರತೀಯರಿಗೆ 10 ಲಕ್ಷ ವಲಸೆರಹಿತ ಹಾಗೂ ಪ್ರವಾಸಿ ವೀಸಾ ವಿತರಿಸಿದ್ದು, ಇದು ದಾಖಲೆಯಾಗಿದೆ.
ಅಮೆರಿಕ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, 2024ರಲ್ಲಿ ಭಾರತದ ಅತಿ ಹೆಚ್ಚು 3,31,000 ವಿದ್ಯಾರ್ಥಿಗಳು ಅಮೆರಿಕಕ್ಕೆ ತೆರಳಿದ್ದಾರೆ. 2008-09 ರ ಬಳಿಕ ಇಷ್ಟೊಂದು ಸಂಖ್ಯೆಯ ವಿದ್ಯಾರ್ಥಿಗಳು ಅಮೆರಿಕಕ್ಕೆ ತೆರಳಿರುವುದು ಇದೇ ಮೊದಲಾಗಿದೆ.
ಅಮೆರಿಕದಲ್ಲಿ ಅಂತರಾಷ್ಟ್ರೀಯ ಪದವಿ ಪಡೆದ ಭಾರತೀಯರ ಸಂಖ್ಯೆಯಲ್ಲಿ ಎರಡು ವರ್ಷದಲ್ಲಿ ಶೇಕಡ 19 ರಷ್ಟು ಏರಿಕೆಯಾಗಿದ್ದು, ಎರಡು ಲಕ್ಷ ಮಂದಿ ಪದವಿ ಪಡೆದುಕೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಪ್ರವಾಸ, ಉದ್ಯಮ, ಶಿಕ್ಷಣ ಸೇರಿ ಅನೇಕ ಉದ್ದೇಶಗಳಿಗೆ ಅಮೆರಿಕಕ್ಕೆ ತೆರಳುವ ಭಾರತೀಯರ ಸಂಖ್ಯೆಯಲ್ಲಿ ಐದು ಪಟ್ಟು ಏರಿಕೆಯಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಪ್ರಮಾಣ 2024ರ ಆರಂಭದಿಂದ ಇದುವರೆಗಿನ 11 ತಿಂಗಳಲ್ಲಿ ಶೇಕಡ 26ರಷ್ಟು ಹೆಚ್ಚಾಗಿದೆ. ಈಗಾಗಲೇ 50 ಲಕ್ಷ ಭಾರತೀಯರ ಬಳಿ ವಲಸೆರಹಿತ ವೀಸಾ ಇದ್ದು, ಪ್ರತಿದಿನ ಹೆಚ್ಚುವರಿ ಒಂದು ಸಾವಿರ ಜನರಿಗೆ ವೀಸಾ ವಿತರಿಸಲಾಗುತ್ತಿದೆ ಎಂದು ಭಾರತದಲ್ಲಿರುವ ಅಮೆರಿಕ ದೂತಾವಾಸ ಕಚೇರಿ ಮಾಹಿತಿ ನೀಡಿದೆ.