ಹರಿಯಾಣ, ಜಜ್ಜರ್: ಐಐಟಿ ಬಾಂಬೆನಿಂದ ಎರೋಸ್ಪೇಸ್ ಇಂಜಿನಿಯರಿಂಗ್ ಪದವಿ ಪಡೆದು ಆಧ್ಯಾತ್ಮದತ್ತ ಹೊರಟಿದ್ದ ಅಭಯ್ ಸಿಂಗ್ ಅವರು ಮಹಾಕುಂಭದಿಂದ ತೆರಳಿದ್ದಾರೆ ಎನ್ನಲಾಗುತ್ತಿದೆ. ತಮ್ಮ ಕುಟುಂಬದೊಂದಿಗೆ ಸಂಬಂಧ ಕಡಿದುಕೊಂಡಿದ್ದ ಅವರನ್ನು ಹುಡುಕಲು ಅವರ ಪೋಷಕರು ಮಹಾಕುಂಭಕ್ಕೆ ಆಗಮಿಸಿದ್ದರು. ಆದರೆ ಅವರನ್ನು ಹುಡುಕಲು ಸಾಧ್ಯವಾಗಿಲ್ಲ.
ಕೆಲವು ತಿಂಗಳ ಹಿಂದೆ ಮಹಾಕುಂಭಕ್ಕೆ ಆಗಮಿಸಿದ್ದ ಅಭಯ್ ಸಿಂಗ್ ಅವರು ಮಾಧ್ಯಮಗಳ ಗಮನ ಸೆಳೆದಿದ್ದರು. ಐಐಟಿ ಪದವೀಧರರೊಬ್ಬರು ಆಧ್ಯಾತ್ಮದತ್ತ ಹೊರಟಿರುವುದು ದೊಡ್ಡ ಸುದ್ದಿಯಾಗಿತ್ತು. ಆದರೆ ಇದೀಗ ಅವರು ಕಾಣೆಯಾಗಿದ್ದು ಕುಟುಂಬಸ್ಥರು ಆತಂಕಗೊಂಡಿದ್ದಾರೆ.
ಅಭಯ್ ಸಿಂಗ್ ಅವರ ತಂದೆ ಕರಣ್ ಸಿಂಗ್ ಅವರು ಮಾತನಾಡಿ, “ಅಭಯ್ ಕೆಲವು ತಿಂಗಳ ಹಿಂದೆ ಮನೆಯಿಂದ ಹೊರಟು ಹೋಗಿದ್ದಾನೆ. ಆತನನ್ನು ಹುಡುಕಲು ನಾವು ಎಷ್ಟು ಪ್ರಯತ್ನಿಸಿದರೂ ಸಿಗುತ್ತಿಲ್ಲ. ಮಹಾಕುಂಭಕ್ಕೆ ಬಂದಿದ್ದೇವೆ ಆದರೆ ಇಲ್ಲಿಯೂ ಸಿಕ್ಕಿಲ್ಲ. ಅವನು ಎಲ್ಲಿ ಹೋಗಿರಬಹುದು ಎಂಬುದು ನಮಗೆ ಗೊತ್ತಿಲ್ಲ,” ಎಂದು ಹೇಳಿದ್ದಾರೆ.
ಅಭಯ್ ಸಿಂಗ್ ಅವರು ಕೆನಡಾದಲ್ಲಿ ಉತ್ತಮ ಸಂಬಳದ ಕೆಲಸವನ್ನು ಬಿಟ್ಟು ಆಧ್ಯಾತ್ಮದತ್ತ ಹೊರಟಿದ್ದರು. ಆದರೆ ಕುಟುಂಬದವರು ಅವರ ಈ ನಿರ್ಧಾರಕ್ಕೆ ವಿರೋಧಿಸಿದ್ದರು. ಇದರಿಂದಾಗಿ ಅವರು ಕುಟುಂಬದೊಂದಿಗೆ ಸಂಬಂಧ ಕಡಿದುಕೊಂಡಿದ್ದರು.