ಬೆಂಗಳೂರು: ಜಿ.ಎಸ್.ಟಿ ಅಧಿಕಾರಿಯೊಬ್ಬರು ಲಂಚ ಪಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ಹಾಗೂ 5 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಉತ್ತರ ಪ್ರದೇಶ ಮೂಲದ ಕೇಂದ್ರೀಯ ಅಬಕಾರಿ ಮತ್ತು ಕೇಂದ್ರ ತೆರಿಗೆ (GST) ಸೂಪರಿಂಟೆಂಡೆಂಟ್ ಜಿತೇಂದ್ರ ಕುಮಾರ್ ಡಾಗೂರ್, 25,000 ರೂಪಾಯಿ ಲಂಚ ಪಡೆದ ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಜಿತೇಂದ್ರ ಕುಮಾರ್ ಅವರನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿದ್ದು ಮೂರು ವರ್ಷ ಜೈಲು ಶಿಕ್ಷೆ, 5 ಲಕ್ಷ ದಂಡ ವಿಧಿಸಿದೆ.
ಜಿತೇಂದ್ರ ಕುಮಾರ್ ಡಾಗೂರ್ 2021ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಜಗದೀಶ್ ಸುಬ್ರಾಯ್ ಭಾವೆ ಅವರಿಂದ 25,000 ರೂಪಾಯಿ ಲಂಚ ಪಡೆಯುತ್ತಿದ್ದಾಗ ಸಿಬಿಐ ಬಲೆಗೆ ಬಿದ್ದಿದ್ದರು. ಡಾಗೂರ್ 50,000 ಲಕ್ಷಕ್ಕೆ ಬೇಡಿಕೆ ಇಟ್ಟು, ಎರಡು ಕಂತಗಳಲ್ಲಿ ನೀಡುವಂತೆ ಹೇಳಿದ್ದರು. ದೂರುದಾರ ಜಗದೀಶ್ ಭಾವೆ ತಮ್ಮ ಮೊಬೈಲ್ ನಲ್ಲಿ ಆಡಿಯೋ ಮತ್ತು ವಿಡಿಯೋ ಮೋಡ್ ನಲ್ಲಿ ಸಂಭಾಷೆಗಳನ್ನು ರೆಕಾರ್ಡ್ ಮಾಡಿ ಸಿಬಿಐಗೆ ದೂರು ಸಲ್ಲಿಸಿದ್ದರು. ಖಚಿತ ಮಾಹಿತಿ ಮೇರೆಗೆ ಡಾಗೂರ್ ಅವರನ್ನು ಬಂಧಿಸಲಾಗಿತ್ತು.